ಮೈಸೂರು: ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಂಬಳದಲ್ಲಿ ಪ್ರಾಣಿ ಹಿಂಸೆಯಾಗಲಿ, ಮಾನವ ಜೀವಕ್ಕೆ ಕುತ್ತು ತರುವಂತಹ ಯಾವುದೇ ರೀತಿಯ ಅಪಾಯವಿಲ್ಲವಾದ್ದರಿಂದ ಅಗತ್ಯತೆ ಕಂಡು ಬಂದರೆ ಇದರ ಪರವಾಗಿ ಕಾನೂನು ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಆರು ದಿನಗಳ ಕಾಲ ನಡೆಯಲಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು ಕಂಬಳ ಯಾವುದೇ ಕಾರಣಕ್ಕೆ ಅಪಾಯಕಾರಿ ಆಟವಲ್ಲ. ಆದರೆ ಜಲ್ಲಿಕಟ್ಟು ಅಪಾಯಕಾರಿ ಆಟವಾಗಿದೆ ಆದ್ದರಿಂದ ನಾವು ಕಂಬಳ ಪರವಾಗಿದ್ದೇವೆ ಎಂದು ಹೇಳಿದರು.
ಸುತ್ತೂರು ಶ್ರೀಕ್ಷೇತ್ರ ಮಠವು ಧಾರ್ಮಿಕ, ಶಿಕ್ಷಣ, ಆರೋಗ್ಯ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲ್ಲ ಕ್ಷೇತ್ರಗಳಲ್ಲೂ ಅಪಾರ ಕೆಲಸ ಮಾಡಿದೆ. ಪೂರ್ವ ಪ್ರಾಥಮಿಕ ಶಾಲೆಗೆ ಸೇರಿದ ಮಗು ಈ ಶಿಕ್ಷಣ ಸಂಸ್ಥೆಗಳಲ್ಲೇ ಸ್ನಾತಕೋತ್ತರ ಪದವಿ ಮುಗಿಸಬಹುದಾದ ಅವಕಾಶವನ್ನು ಶ್ರೀ ಮಠ ಒದಗಿಸಿರುವ ಬಗ್ಗೆ ಶ್ಲಾಘಿಸಿದರು. 23ನೇ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ಶಿಕ್ಷಣ ಹಾಗೂ ಸಮಾಜ ಸುಧಾರಣೆಗೆ ಉತ್ತಮ ಅಡಿಪಾಯ ಹಾಕಿದ್ದಾರೆ. 24ನೇ ಪೀಠಾಧ್ಯಕ್ಷರಾದ ಈಗಿನ ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿಯವರು ಈ ಅಡಿಪಾಯದ ಮೇಲೆ ಭವ್ಯ ಸೌಧ ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.
ಸುತ್ತೂರು ಜಾತ್ರೆ ಕೇವಲ ಜಾತ್ರೆಯಲ್ಲ. ಬದುಕಿಗೆ ಬೇಕಾದ ಜ್ಞಾನವನ್ನು ಬಿತ್ತುವ ಕಾರ್ಯಗಳನ್ನು ಈ ಜಾತ್ರೆಯ ಮೂಲಕ ಶ್ರೀಮಠ ಮಾಡುತ್ತಿದೆ. ಜಾತ್ರೆಯಲ್ಲಿ ವಸ್ತು ಪ್ರದರ್ಶನ, ಕೃಷಿ ಮೇಳವನ್ನು ಉದ್ಘಾಟನೆ ಮಾಡಿದ್ದೇನೆ. ಕೃಷಿಯಲ್ಲಿ ವೈಜ್ಞಾನಿಕ ಬೆಳೆ ಪದ್ಧತಿಯನ್ನು ರೈತರಿಗೆ ತಿಳಿಸಲಾಗುತ್ತಿದೆ. ಕೃಷಿಯಲ್ಲಿ ಹೊಸ ಬೆಳೆ, ಹೊಸ ತಳಿಗಳು, ತಂತ್ರಜ್ಞಾನದ ಬೆಳವಣಿಗೆ, ಮಾರುಕಟ್ಟೆ ಬೆಳವಣಿಗೆ ರೈತರಿಗೆ ತಿಳಿಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್ ಸಚಿವರಾದ ಹೆಚ್.ಕೆ. ಪಾಟೀಲ್, ಲೋಕಸಭಾ ಸದಸ್ಯರಾದ ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಗೋವಾದ ತಪೋಭೂಮಿ ಗುರುಪೀಠದ ಶ್ರೀ ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.