ಮೈಸೂರು: ಪೊದಾರ್ ಇಂಟರ್ ನ್ಯಾಷನಲ್ ಶಾಲಾವತಿಯಿಂದ ದಿನಾಂಕ 26 ಜನವರಿ 2017 ರಂದು ಬೆಳಿಗ್ಗೆ 7 ಘಂಟೆಗೆ ಸರಿಯಾಗಿ ಸಮಾಜಕ್ಕೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಮಿನಿ ಮ್ಯಾರಥಾನ್’ ಅನ್ನು ವಿಜಯನಗರದ 2ನೇ ಹಂತದಲ್ಲಿರುವ ಪೊದಾರ್ ಇಂಟರ್ ನ್ಯಾಷನಲ್ ಶಾಲಾ ಆವರಣದಿಂದ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಸ್ವಚ್ಛತಾ ಪ್ರೇಮಿಗಳು ಪರಿಸರ ಕಾಳಜಿಯನ್ನು ಬಿಂಬಿಸುವ ಟಿ ಶರ್ಟ್ ಧರಿಸಿ, ಸ್ವಚ್ಛತಾ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಮೈಸೂರು ನಗರವನ್ನು ಸ್ವಚ್ಛ ನಗರಿಯನ್ನಾಗಿ ಮುಂದುವರಿಸುವ ಆಶಯವೇ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.
ಈ ಕಾರ್ಯಕ್ರಮವನ್ನು ಕನ್ನಡ ಸಿನಿಮಾ ನಟ ಶ್ರೀ ಸೂರಜ್ ಗೌಡರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡಿದರು. ಪೊದಾರ್ ಶಾಲೆಯು ತನ್ನ ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರುಗಳಿಗಾಗಿ ತಂಡವನ್ನು 12 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಹಾಗೂ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಮತ್ತು ಪಾಲಕರ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರೆಂದು ಪ್ರತ್ಯೇಕವಾಗಿ ವಿಭಾಗಿಸಿ ಈ ಕಾರ್ಯಕ್ರಮವನ್ನು ಸಂಯೋಜಿಸಿತ್ತು.
ಶಾಲಾ ಪ್ರಾಂಶುಪಾಲರಾದ ಶ್ರೀಯುತ ಕೃಷ್ಣ ಬಂಗೇರರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಿನಿಮಾ ನಟ ಶ್ರೀ ಸೂರಜ್ ಗೌಡರವರನ್ನು ಅಭಿನಂದಿಸಿದರು ಮತ್ತು ಕಾರ್ಯಕ್ರಮ ಸಸೂತ್ರವಾಗಿ ಯಶಸ್ವಿಯಾಗಲು ಸಹಕರಿಸಿದ ಎಲ್ಲರನ್ನೂ ವಂದಿಸಿದರು. ನಂತರ ಗಣರಾಜ್ಯೋತ್ಸವದ ಕಾರ್ಯಕ್ರಮವು ಧ್ವಜಾರೋಹಣ ಮಾಡುವ ಮೂಲಕ ಶಾಲಾ ಆವರಣದಲ್ಲಿ ನೆರವೇರಿತು.