ಮೈಸೂರು: ಸರ್ಕಾರದ ಸವಲತ್ತುಗಳನ್ನು ಆದಿವಾಸಿ ಜನಾಂಗದ ಫಲಾನುಭವಿಗಳಿಗೆ ವಿತರಿಸಲು ಫೆಬ್ರವರಿ 1 ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು.
ಅವರು ಇಂದು ಜಲದರ್ಶಿನಿಯಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ಅಧಿಕಾರಿಗಳ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಆದಿವಾಸಿಗಳಿಗೆ ಸರ್ಕಾರದ ಯೋಜನೆಗಳ ಮಾಹಿತಿ ಮೊದಲು ತಲುಪಬೇಕು ಎಂಬ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ವಿವಿಧ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಮಾಹಿತಿಯನ್ನು ಕ್ರೋಡೀಕರಿಸಿ ಉತ್ತಮ ರೀತಿಯಲ್ಲಿ ಸಮ್ಮೇಳನದಲ್ಲಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 12 ಸಾವಿರ ಆದಿವಾಸಿ ಜನಾಂಗದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಅವರು ಕಾರ್ಯಕ್ರಮ ನಡೆಯಲಿರುವ ಫೆಬ್ರವರಿ 1 ರಂದು ಮಧ್ಯಾಹ್ನ 12 ಗಂಟೆಗೆ ಆಗಮಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು. ನೋಡಲ್ ಅಧಿಕಾರಿಗಳು ತಮ್ಮ ಜಿಲ್ಲೆಯಿಂದ ಆಗಮಿಸುವ ಆದಿವಾಸಿ ಜನಾಂಗದವರ ಪಟ್ಟಿ ಮಾಡಿಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ಅವರನ್ನು ಒಗ್ಗೂಡಿಸಿ ಕಾರ್ಯಕ್ರಮಕ್ಕೆ ಕರೆತರಬೇಕು. ದೂರದ ಜಿಲ್ಲೆಗಳಿಂದ ಆಗಮಿಸುವವರಿಗೆ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಸತಿ ನಿಲಯಗಳಲ್ಲಿ ಬೆಳಿಗಿನ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಮಾನ್ಯ ಮುಖ್ಯಮಂತ್ರಿಗಳು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಆದಿವಾಸಿಗಳು ತಮಗೆ ಇರುವ ತೊಂದರೆಗಳ ಬಗ್ಗೆ ಮನವಿ ಸಲ್ಲಿಸುತ್ತಾರೆ. ಇದಕ್ಕೂ ಸಹ ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳಬೇಕು. ಜಿಲ್ಲೆಗಳಲ್ಲಿರುವ ಆದಿವಾಸಿ ಜನಾಂಗದ ಮುಖ್ಯಸ್ಥರಿಂದ ಅವರಿಗೆ ಇರುವ ತೊಂದರೆಗಳ ಬಗ್ಗೆ ಮನವಿ ಪಡೆದುಕೊಂಡು ಕ್ರೋಢೀಕರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದು ಉತ್ತಮ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಹಾಗೂ ಬ್ಯಾರಿಕೇಡಿಂಗ್ ನಿರ್ಮಾಣ ಮಾಡುವ ಮೊದಲು ನಗರ ಪೊಲೀಸ್ ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ಮಾಡಿ ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ನಿಲುಗಡೆ ಸ್ಥಳ, ಗಣ್ಯರ ವಾಹನ ನಿಲುಗಡೆ ಸ್ಥಳ ನಿಗಧಿ ಮಾಡಿಕೊಳ್ಳುವಂತೆ ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಅರಣ್ಯ ಹಕ್ಕು ಪತ್ರ, ಪೌಷ್ಠಿಕ ಆಹಾರ ವಿತರಣೆ, ಬಹುಮಾನ ಮೊತ್ತ ವಿತರಣೆ ಹಾಗೂ ಇನ್ನಿತರೆ ಸೌಲಭ್ಯಗಳ ಪತ್ರಗಳನ್ನು ವಿತರಿಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳ ಆಯ್ದ ಫಲಾನುಭವಿಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಗುವುದು. ಇವರಿಗೆ ಗುರುತಿನ ಚೀಟಿ ನೀಡಿ ವೇದಿಕೆಯ ಮೇಲೆ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಆಹಾರ, ಭದ್ರತೆ, ಸ್ವಚ್ಫತೆ, ವೇದಿಕೆ ಹಾಗೂ ಇನ್ನಿತರ ಸಮಿತಿಗಳನ್ನು ರಚಿಸುವಂತೆ ತಿಳಿಸಿದರು. ಸಭೆಯಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ನಿರ್ದೇಶಕ ರೇವಣ್ಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಸವನಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.