ಮೈಸೂರು: ರಾಜ್ಯ ಕಾಂಗ್ರೆಸ್ ಗೆ ಮೇಲಿಂದ ಮೇಲೆ ಶಾಕಿಂಗ್ ಸುದ್ದಿಗಳು ಬರುತ್ತಿದ್ದು ಚೇತರಿಸಿಕೊಳ್ಳಲಾಗದಂತ ಹೊಡೆತ ಬೀಳತೊಡಗಿದೆ. ಕಾಂಗ್ರೆಸ್ ನಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ರಾಜಕಾರಣಿಯಾಗಿ, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಎಸ್.ಎಂ.ಕೃಷ್ಣರವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ.
ಅವರು ನೀಡಿರುವುದು ಪಕ್ಷಕ್ಕೆ ರಾಜೀನಾಮೆಯೇ ಅಥವಾ ರಾಜಕೀಯ ನಿವೃತ್ತಿಯೇ ಎಂಬುದು ಭಾನುವಾರ ಕರೆದಿರುವ ಪತ್ರಿಕಾಗೋಷ್ಠಿ ಬಳಿಕ ತಿಳಿಯಲಿದೆ. ಇವರ ದಿಢೀರ್ ನಿರ್ಧಾರಕ್ಕೂ ಹತ್ತು ಹಲವು ಕಾರಣಗಳು ಕಂಡು ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ನಲ್ಲಿದ್ದರೂ ಅವರು ಮೌನವಾಗಿದ್ದರು. ಅದಕ್ಕಿಂತ ಹೆಚ್ಚಾಗಿ ಅವರ ಸಲಹೆ ಕೇಳುವ ಸ್ಥಿತಿಯಲ್ಲಿ ಕೈ ನಾಯಕರು ಇರಲಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕವಂತೆ ಎಸ್.ಎಂ.ಕೃಷ್ಣ ಅವರ ಮಾತಿಗೆ ಮನ್ನಣೆ ದೊರೆಯಲಿಲ್ಲ. ಸುಮಾರು ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಅವರ ಸಲಹೆ ಕೇಳುವ ತಾಳ್ಮೆ ಕೂಡ ನಾಯಕರಿಗೆ ಇರಲಿಲ್ಲ. ಕಡಗಣನೆಗೆ ಒಳಗಾಗಿದ್ದ ಅವರು ತಟಸ್ಥವಾಗಿಯೇ ಉಳಿದು ಬಿಟ್ಟರು.
ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿತ್ತು. ಆ ಬಳಿಕ ಅವರನ್ನು ಕಡೆಗಣಿಸಿಕೊಂಡೇ ಬರಲಾಯಿತು. ಆದರೆ ಎಲ್ಲವನ್ನು ಸಹಿಸಿಕೊಂಡೇ ಬಂದರು. ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ದೊಂಬರಾಟವನ್ನು ನೋಡುತ್ತಾ ಅಸಹಾಯಕರಾಗಿದ್ದ ಅವರು, ಶ್ರೀನಿವಾಸ ಪ್ರಸಾದ್ ಅವರನ್ನು ಕೈಬಿಟ್ಟಾಗ ನೊಂದಿದ್ದರು. ಪ್ರಧಾನಿ ಮೋದಿ ಅವರು ಐನೂರು, ಸಾವಿರ ನೋಟನ್ನು ಅಮಾನ್ಯ ಮಾಡಿದ್ದನ್ನು ಕಾಂಗ್ರೆಸ್ ವಿರೋಧಿಸಿದ್ದರೂ ಅವರು ಮಾತ್ರ ಸ್ವಾಗತಾರ್ಹ ಕ್ರಮ ಎಂದಿದ್ದರು. ಅವರ ನಡೆ ಅದಾಗಲೇ ಕಾಂಗ್ರೆಸ್ ನಲ್ಲಿ ಅವರಿಗೆ ಬೇಸರವನ್ನುಂಟಾಗಿದೆ ಎಂಬುದನ್ನು ಹೊರಹಾಕಿತ್ತು. ಇನ್ನು ಮಂಡ್ಯ ರಾಜಕಾರಣದಲ್ಲಿಯೂ ಅವರಿಗೆ ಆಸಕ್ತಿ ಹೊರಟು ಹೋಗಿತ್ತು. ಕಾರಣ ಅಂಬರೀಶ್ ಮತ್ತು ಅವರ ನಡುವೆ ಸಂಬಂಧವೂ ಅಷ್ಟಕಷ್ಟೆ ಎಂಬಂತಾಗಿತ್ತು.
ಹಾಗೆ ನೋಡಿದರೆ 1962ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುವ ಮೂಲಕ ತನಗೆ ನೀಡಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ತೀವ್ರ ಬರ, ವೀರಪ್ಪನ್ ಅಟ್ಟಹಾಸ, ಡಾ.ರಾಜ್ ಕುಮಾರ್ ಅಪಹರಣ, ಕಾವೇರಿ ನೀರು ವಿವಾದ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ಒಬ್ಬ ಪ್ರಭಾವಶಾಲಿ ಹಿರಿಯ ರಾಜಕಾರಣಿಯಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ರಾಷ್ಟ್ರ, ರಾಜ್ಯ ಕಾಂಗ್ರೆಸ್ ನಲ್ಲಿ ಗಮನಾರ್ಹ ಹುದ್ದೆ ನೀಡಿ ಸಕ್ರಿಯ ರಾಜಕಾರಣದಲ್ಲಿ ಬಳಸಿಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್ ಅವರನ್ನು ಮರೆತೇ ಬಿಟ್ಟಿತ್ತು ಎಂದರೂ ತಪ್ಪಾಗಲಾರದು. ಹೀಗಾಗಿಯೇ ಅವರು ಇದೀಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಅವರ ನಡೆ ಏನು ಎಂಬುದು ಕಾದು ನೋಡಬೇಕಿದೆ.