ಮೈಸೂರು: ಮಕ್ಕಳಿಲ್ಲದ ವೃದ್ದನ ನಿವೇಶನವನ್ನ ಕಬಳಿಸಲು ವೃದ್ದನನ್ನೇ ಆಸ್ಪತ್ರೆಯಿಂದ ಕಿಡ್ನಾಪ್ ಮಾಡಿದ ಬಿಜೆಪಿ ಸ್ಥಳೀಯ ಮುಖಂಡ ಈಗಾ ಪೊಲೀಸರ ಅತಿಥಿಯಾಗಿರುವ ಘಟನೆ ನಗರದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಬಿಜೆಪಿ ಮುಖಂಡ ಆಲನಹಳ್ಳಿ ಪುಟ್ಟಸ್ವಾಮಿ ಹಾಗೂ ಕಿಶೋರ್ ಎಂದು ಗುರುತಿಸಲಾಗಿದೆ. ಅಗ್ರಹಾರ ಗುರುಸಿದ್ದಪ್ಪ ಅಪಹರಣಕ್ಕೊಳಗಾದ ವೃದ್ದರಾಗಿದ್ದಾರೆ. ಅಗ್ರಹಾರದ ನಿವಾಸಿ ಗುರುಸಿದ್ದಪ್ಪ ಅವರ ಬಳಿ ಅವರ ಹೆಸರಿನಲ್ಲಿ ಗಣಪತಿ ದೇವಾಲಯದ ಎದುರು 1.5 ಕೋಟಿ ಬೆಲೆಬಾಳುವ ಹಳೆ ಮನೆ ಇದೆ. ಆದರೆ ಗುರುಸಿದ್ದಪ್ಪನಿಗೆ ಮಕ್ಕಳಿಲ್ಲದ ಕಾರಣ ಹಾಗೂ ತೀವ್ರ ಅನಾರೋಗ್ಯದಿಂದ ಹಳೆ ಮನೆಯನ್ನ ಮಾರಾಟ ಮಾಡಲು ನಿರ್ಧರಿಸಿದ.
ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಆಲನಹಳ್ಳಿ ಪುಟ್ಟಸ್ವಾಮಿಯೊಂದಿಗೆ ಆರು ತಿಂಗಳ ಹಿಂದೆ ಹಳೆಯ ಮನೆಯನ್ನ ಮಾರಾಟ ಮಾಡುವ ಬಗ್ಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದು, ಆರು ತಿಂಗಳ ನನ್ನ ಹೆಸರಿಗೆ ನೊಂದಣಿ ಮಾಡಿಕೊಳ್ಳುವುದಾಗಿ ಅಡ್ವಾಂಸ್ ನೀಡಿದ. ಆರು ತಿಂಗಳ ನಂತರ ಮೋದಿ ಅವರ ನೋಟ್ ಬ್ಯಾನ್ ನಿಂದ ಹಣ ಹೊರ ತೆಗೆಯಲು ಕಷ್ಟವಾಗುತ್ತಿದ್ದು, ಆದ್ದರಿಂದ ಬ್ಯಾಂಕ್ ನಲ್ಲಿ ಲೋನ್ ಮಾಡಿಸಲು, ಮೂಲ ದಾಖಲಾತಿ ಬೇಕೆಂದು ಪೀಡಿಸುತ್ತಿದ್ದ. ಇದಕ್ಕೆ ವೃದ್ದ ಗುರು ಸಿದ್ದಪ್ಪ ಒಪ್ಪಲಿಲ್ಲ. ಇದರಿಂದ ಆಲನಹಳ್ಳಿ ಪುಟ್ಟಸ್ವಾಮಿ ಕೋಪಗೊಂಡಿದ್ದ.
ಆಸ್ಪತ್ರೆಯಿಂದ ಕಿಡ್ನಾಪ್:
ಈ ನಡುವೆ ತೀವ್ರ ಆನಾರೋಗ್ಯದ ಹಿನ್ನಲ್ಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿದ ವೃದ್ದ ಗುರುಸಿದ್ದಪ್ಪ, ಅವರನ್ನ ನಿನ್ನೆ ಮದ್ಯಾಹ್ನ ಆಲನಹಳ್ಳಿ ಪುಟ್ಟಸ್ವಾಮಿ ಮತ್ತು ಅವರ ತಂಡ ಆಸ್ಪತ್ರೆಗೆ ನುಗ್ಗಿ ಅವರನ್ನ ಬಲವಂತವಾಗಿ ಎತಿಕೊಂಡು ಹೊರಬಂದು ತಮ್ಮ ಕಾರಿನಲ್ಲಿ ಹಾಕಿಕೊಂಡು ನಗರದ ಜಗನ್ಮೋಹನ ಅರಮನೆಯ ಬಳಿ ಕರೆತಂದು 5 ಖಾಲಿ ಬಾಂಡ್ ಪೇಪರ್ ಗೆ ಸಹಿ ಮಾಡಿಸಿಕೊಂಡು ವಾಪಸ್ಸ್ ಸಿನಿಮೀಯ ರೀತಿಯಲ್ಲಿ ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ.
ಗಾಬರಿಗೊಂಡಿರುವ ವೃದ್ದ ಗುರುಸಿದ್ದಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಬಂಧಿಕ ಮಂಜುನಾಥ್ ಕಿಡ್ನಾಪ್ ಪ್ರಕರಣವನ್ನ ನಗರದ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.