ಮೈಸೂರು: 2003ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಆರಂಭವಾದ ಯಶಸ್ವಿನಿ ಯೋಜನೆಯು ದೇಶದಲ್ಲಿಯೇ ಅತ್ಯುತ್ತಮ ಯೋಜನೆಯೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಮಹತ್ವಪೂರ್ಣ ಯೋಜನೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗಲು ರಾಜ್ಯ ಸರ್ಕಾರ ನಿರಾಸಕ್ತಿ ತಾಳಿದೆ. ಉತ್ತಮವಾಗಿ ನಡೆದುಕೊಂಡು ಹೋಗುತ್ತಿದ್ದ ಯೋಜನೆಯನ್ನು ದೇಶದಲ್ಲಿಯೇ ವಿಫಲವಾದ ವಾಜಪೇಯಿ ಆರೋಗ್ಯಶ್ರೀಯೊಂದಿಗೆ ವಿಲೀನಗೊಳಿಸಬಾರದು ಎಂದು ಸರ್ಕಾರದ ಕ್ರಮವನ್ನು ಹೆಚ್ ವಿಶ್ವನಾಥ ತೀವ್ರವಾಗಿ ಖಂಡಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿಂದಲೂ ಯೋಜನೆಯಡಿ ಎರಡು ಯಶಸ್ವಿನಿ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿಯ ಸುಮಾರು 780 ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ. ಸರ್ಕಾರದಿಂದ ಸುಮಾರು 1225 ಕೋಟಿ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯ ಮಾಡಲಾಗಿದೆ. 43 ಲಕ್ಷಕ್ಕೂ ಅಧಿಕ ಮಂದಿ ಯೋಜನೆಯ ಫಲಾನುಭವಿಗಳಿದ್ದು ಹೃದಯ ಸೇರಿದಂತೆ ಒಟ್ಟು 823 ಶಸ್ತ್ರ ಚಿಕಿತ್ಸೆಗಳು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುತ್ತಿದೆ. ಆದ್ದರಿಂದ ಈ ಯೋಜನೆಯೊಂದಿಗೆ ಇತರೇ ವಿಫಲ ಯೋಜನೆಗಳನ್ನು ವಿಲೀನಗೊಳಿಸಿ ಅದರ ಹೊರತಾಗಿ ವಿಫಲ ಯೋಜನೆಯೊಂದಿಗೆ ಯಶಸ್ವಿನಿಯನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವು ಸರಿಯಲ್ಲವೆಂದರು. ಈ ಬಗ್ಗೆ ಪುನರ್ ಪರಿಶೀಲನೆ ಅಗತ್ಯವೆಂದರು.
ಸರ್ಕಾರಕ್ಕೆ ಪತ್ರ: ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದ್ದು ಇಂದಿಗೂ ಸರ್ಕಾರದಿಂದ ಪ್ರತ್ಯುತ್ತರ ಬಂದಿಲ್ಲ, ಮಾಜಿಗಳ ಬಗ್ಗೆ ಬೇಜವಾಬ್ದಾರಿ ಧೋರಣೆ ಪ್ರದರ್ಶಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳು ಸ್ವಯಂ ನಿರ್ಧಾರ ತೆಗೆದುಕೊಳ್ಳದೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಡೆಯುತ್ತಿರುವುದು ಸಮಂಜಸವಲ್ಲವೆಂದರು.
ನೋಟೀಸ್ : ನಾನೇನು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವೆನೇ ಹಗರಣಗಳಲ್ಲಿ ಭಾಗಿಯಾಗಿರುವೆನೇ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಕೆಲಸವೇನಾದರು ಮಾಡಿರುವೇನೆ ನನಗೇಕೆ ನೋಟೀಸು ಎಂದು ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ನನಗೆ ಇಲ್ಲಿಯವರೆಗೂ ಎಐಸಿಸಿ ಹಾಗೂ ಕೆಪಿಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ, ಬರುವ ದಾರಿಯಲ್ಲಿದೆ ಎಂದು ಹಾಸ್ಯದ ಚಟಾಕಿ ಹಾರಿಸಿದರಲ್ಲದೇ , ನೋಟೀಸ್ ಬಂದರೂ ಸ್ಥಳೀಯ ಕಾರ್ಯಕರ್ತರ, ಬೆಂಬಲಿಗ ಮುಖಂಡರ ಹಾಗೂ ಸಾರ್ವಜನಿಕರ ಸಭೆ ನಡೆಸಿ, ಸಭೆಯ ನಿರ್ಣಯದಂತೆ ನೋಟೀಸಿಗೆ ಪ್ರತ್ಯುತ್ತರ ನೀಡಲಾಗುವುದು ಎಂದು ತಿಳಿಸಿದರು.