ನಂಜನಗೂಡು: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದಡದಲ್ಲಿರುವ ಕಪಿಲಾ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಟ್ಟಣದ ನಿವಾಸಿ ಪೊಲೀಸ್ ದಫೇದಾರ್ ಎಂ.ಮಹೇಶ್ ಎಂಬುವರ ಪುತ್ರ ರವಿಕುಮಾರ್(13) ಮೃತಪಟ್ಟವನು. ಈತ ಸ್ಥಳೀಯ ಪ್ರತಿಷ್ಠಿತ ಸಿಟಿಜನ್ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದನು.
ಶನಿವಾರ ಮನೆಯಲ್ಲಿದ್ದ ರವಿಕುಮಾರ್ ಮಧ್ಯಾಹ್ನ 3ರ ಸಮಯದಲ್ಲಿ ತನ್ನ ಸ್ನೇಹಿತರೊಡನೆ ಮನೆಗೆ ಪಾಠಕ್ಕೆ ಹೋಗುತ್ತೇನೆಂದು ಹೇಳಿ ಹೋದವನು ಮನೆಪಾಠಕ್ಕೆ ಹೋಗದೆ ನೇರವಾಗಿ ಕಪಿಲ ನದಿಗೆ ತೆರಳಿ ನೀರಿನಲ್ಲಿ ಈಜಾಡಿದ್ದಾನೆ.
ಆದರೆ ನದಿಯ ಆಳ ತಿಳಿಯದ ಕಾರಣ ಸುಳಿಗೆ ಸಿಕ್ಕಿ ಮುಳುಗಿದ್ದಾನೆ. ಇದನ್ನು ನೋಡಿದ ಕೆಲವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಮೃತದೇಹಕ್ಕೆ ಹುಡುಕಾಟ ನಡೆಸಲಾಯಿತಾದರೂ ಸುಮಾರು ಒಂದು ಘಂಟೆ ಕಾಲ ಬಳಿಕ ಶವ ದೊರೆತಿದೆ.
ನಗರ ಪೊಲೀಸ್ ಠಾಣೆಯ ಪಿಎಸ್ಐ ವೀರಭದ್ರಪ್ಪನವರು ಪ್ರಕರಣ ದಾಖಲಿಸಿಕೊಂಡಿದ್ದರೆ.