ಮೈಸೂರು: ಕೇರಳದ ವ್ಯಾಪಾರಿಯೊಬ್ಬರಿಗೆ 25 ಲಕ್ಷ ಹಣ ನೀಡದಿದ್ದರೆ ಮಹಿಳೆಯೊಂದಿಗಿರುವ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾವುದಾಗಿ ಬೆದರಿಕೆ ಹಾಕುತ್ತಿದ್ದ ಹನಿಟ್ರ್ಯಾಪ್ ಜಾಲವನ್ನು ಭೇದಿಸಿದ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ತಿಳಿಸಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಜ್ಯೂವೆಲರಿ ವ್ಯಾಪಾರಿ ಟಿ.ವಿ.ನಿಝಾರ್ ರವರು ಮೈಸೂರಿಗೆ ಬಂದಾಗ ಹೋಟೆಲ್ ರುಚಿ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಟಿ.ವಿ.ನಿಝಾರ್ ಅವರಿಗೆ ಅನಾಮದೇಯ ವ್ಯಕ್ತಿ ಮೊಬೈಲ್ ಕರೆ ಮಾಡಿ ನಿನ್ನ ಎಲ್ಲಾ ಪೂರ್ವ ಚರಿತ್ರೆ ತಿಳಿದಿದ್ದು, ಹೋಟೆಲ್ ನಲ್ಲಿ ಪರಸ್ತ್ರೀಯೊಂದಿಗೆ ಉಳಿದುಕೊಂಡಿದ್ದಾಗ ತೆಗೆದಿರುವ ವೀಡಿಯೋ ನನ್ನ ಬಳಿ ಇದೆ. 25 ಲಕ್ಷ ಹಣ ಕೊಡಬೇಕು. ಇಲ್ಲದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಮತ್ತು ಟಿ.ವಿಯಲ್ಲಿ ಪ್ರಸಾರ ಮಾಡಿಸುವುದಾಗಿ ಹಾಗೂ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ ಕಳೆದ ವಾರದಿಂದ ಪದೇ ಪದೇ ಫೋನ್ ಮಾಡಿ ಬೆದರಿಕೆ ಹಾಕಿ ಹಣ ನೀಡುವಂತೆ ಕಿರುಕುಳ ನೀಡುತ್ತಿರುವುದಾಗಿ ನಿಝಾರ್ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತೀವ್ರತೆಯ ಅರಿತ ಪೊಲೀಸರು ತನಿಖಾ ಜವಾಬ್ದಾರಿಯನ್ನು ಸಿಸಿಬಿ ಘಟಕಕ್ಕೆ ವಹಿಸಿದ್ದರು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರ ವಿಶೇಷ ತಂಡ ಆರೋಪಿಗಳ ಜಾಡು ಹಿಡಿದು, ಮಾ.9ರಂದು ನಗರದ ಹೈವೆ ವೃತ್ತದಲ್ಲಿರುವ ಹೋಟೆಲ್ ನಳಪಾಡ್ ಬಳಿ ಆರೋಪಿಗಳಾದ ಯೂಸೂಪ್ ಮನು, ಲತೀಪ್, ಅಲ್ತಾಪ್ ಎಂಬುವವರುಗಳನ್ನು ಬಂಧಿಸಿ ಮಾ.11ರಂದು ಬೆಂಗಳೂರಿನಲ್ಲಿ ಈ ಪ್ರಕರಣದ ಇತರೇ ಆರೋಪಿಗಳಾದ ನೌಶಾದ್.ಸಿ.ಪಿ, ರಶೀದ್ ರಾಶಿ, ಹೀನಾ, ಆಯಿಷಾ, ಶಬರೀನಾ, ಹಾಗೂ ಅನಿತ ಅನಿ ಎಂಬುವರುಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಲಾಗಿ ಆರೋಪಿಗಳಾದ ಶಾಯಿದ್ ಮತ್ತು ನೌಶಾದ್ ಚಿನ್ನದ ವ್ಯಾಪಾರಿಯಾದ ಟಿ.ವಿ.ನಿಝಾರ್ ಅವರ ಊರಿನವರೇ ಆಗಿದ್ದು, ಟಿ.ವಿ.ನಿಝಾರ್ ಅವರ ಹಣಕಾಸಿನ ಪೂರ್ವ ಹಿನ್ನೆಲೆ ಮತ್ತು ಆತನ ಬಗ್ಗೆ ತಿಳಿದುಕೊಂಡು ಫೋನ್ ನಂಬರ್ ಸಂಗ್ರಹಿಸಿ ಇತರೇ ಆರೋಪಿಗಳೊಂದಿಗೆ ಸೇರಿಕೊಂಡು ಪ್ಲಾನ್ ಮಾಡಿ ಇವರ ಮೊಬೈಲ್ ನಂಬರನ್ನು ಮಹಿಳಾ ಆರೋಪಿ ಹೀನಾ, ಆಯಿಷಾ, ಶಬರೀನಾಳೀಗೆ ಕೊಟ್ಟು, ಆಕೆ ನಿಝಾರ್ ಗೆ ಫೋನ್ ಮಾಡಿ, ಸ್ನೇಹ ಬೆಳೆಸಿಕೊಂಡು ತನ್ನೊಂದಿಗೆ ಹಾಗೂ ಅನಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಮೊಬೈಲ್ ಫೋನ್ ಗಳಲ್ಲಿ ಈ ದೃಶ್ಯಾವಳಿಗಳನ್ನು ದಾಖಲಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ನಿಝಾರ್ ಹೀನಾ ಮತ್ತು ಅನಿತಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸಿಕೊಂಡು, ನಂತರ ದೃಶ್ಯಾವಳಿಯನ್ನು ಡಿವಿಡಿಗೆ ಕಾಪಿ ಮಾಡಿ, ಡಿವಿಡಿಯ ಕಾಪಿಯನ್ನು ನಿಝಾರ್ ಗೆ ಕಳುಹಿಸಿದ್ದಾರೆ. ಬಳಿಕ ಅವರಿಂದ 25 ಲಕ್ಷ ರೂಗೆ ಬೇಡಿಕೆ ಇಟ್ಟು, ಹಣವನ್ನು ಕೊಡದಿದ್ದಲ್ಲಿ ತಮ್ಮ ಬಳಿ ಇರುವ ಮಾಸ್ಟರ್ ಡಿವಿಡಿ ಯಲ್ಲಿರುವ ದೃಶ್ಯಾವಳಿಯನ್ನು ಸಾಮಾಜಿಕ ತಾಣ ಹಾಗೂ ಟಿ.ವಿ.ಗಳಲ್ಲಿ ಪ್ರಸಾರ ಮಾಡಿಸುವುದಾಗಿ, ಮೊಬೈಲ್ ಫೋನ್ ಮೂಲಕ ಬೆದರಿಕೆಯೊಡ್ಡಿರುವುದಾಗಿ ತಿಳಿಸಿರುತ್ತಾರೆ.
ಆರೋಪಿಗಳಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಬಗ್ಗೆ ತೆಗೆಯಲಾಗಿರುವ ಚಿತ್ರೀಕರಣದ ಡಿವಿಡಿ ಹಾಗೂ ಬೆದರಿಕೆಯೊಡ್ಡಲು ಬಳಸಿದ್ದ ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ್ದ ಇನ್ನೋವ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯಿಂದ ಈ ಆರೋಪಿಗಳ ವಿರುದ್ದ ಈ ಹಿಂದೆ ಕೇರಳ ರಾಜ್ಯ ಮತ್ತು ಬೆಂಗಳೂರಿನಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಆರೋಪಿಗಳ ವಿರುದ್ದ ಈ ಪ್ರಕರಣಗಳಲ್ಲದೇ ಬೇರೆ ಪ್ರಕರಣಗಳು ವಿವಿಧ ಸ್ಥಳಗಳಲ್ಲಿ ವರದಿಯಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ.