ಮೈಸೂರು: ಮಾಡಿದ ತಪ್ಪಿನಿಂದ ಎಸ್ಕೇಪ್ ಆಗಲು ಖದೀಮರು ಏನೆಲ್ಲಾ ಉಪಾಯ ಹುಡುಕುತ್ತಾರೆ ಎಂಬುದಕ್ಕೊಂದು ನಿದರ್ಶನ ಈ ಎಎಸ್ ಐ, ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ಮಾರ್ಗ ಮದ್ಯೆ 500 ಮುಖಬೆಲೆಯ ನಾಲ್ಕು ನೋಟುಗಳನ್ನ ನುಂಗಿರುವ ವಿಚಿತ್ರ ಘಟನೆ ನಡೆದಿದೆ.
ಕಳೆದ ಸೋಮವಾರ ಕೆ.ಆರ್ ಸಂಚಾರ ಠಾಣೆಯ ಎಎಸ್ ಐ ರಮೇಶ ಜ್ಯೂಸ್ ಅಂಗಡಿವೊಂದರಲ್ಲಿ ಆಟೋ ಡ್ರೈವರ್ ನಿಂದ 2 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅವರನ್ನು ಠಾಣೆಗೆ ಕರೆದುಕೊಂಡು ಬರುವ ಮಾರ್ಗಮಧ್ಯೆ 500 ಮುಖ ಬೆಲೆಯ ನಾಲ್ಕು ನೋಟುಗಳನ್ನ ಅಗಿದು ನುಂಗಿದ್ದಾನೆ. ಇದನ್ನ ಕಂಡ ಪೊಲೀಸರು ತಕ್ಷಣ ಅವರ ಎಂಜಲನ್ನ ಸಂಗ್ರಹಿಸಿಕೊಂಡು ವಿಡಿಯೋ ಸಹ ಮಾಡಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರನ್ನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಹೊಟ್ಟೆಯಲ್ಲಿರುವ ನೋಟುಗಳ ಕುರಿತು ಪರೀಕ್ಷೆ ನಡೆಸುವಂತೆ ಕೋರಿದ್ದು ನಿನ್ನೆ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆದಿದ್ದು ಇಂದು ಅದರ ವರದಿ ಎಸಿಬಿ ಪೊಲೀಸರ ಕೈ ಸೇರಲಿದೆ ಎಂದು ಎಸಿಬಿ ಎಸ್ಪಿ ಕವಿತಾ ಹೇಳಿದ್ದಾರೆ. ಈಗ ನ್ಯಾಯಾಂಗ ಬಂಧನದಲ್ಲಿರುವ ಸಂಚಾರಿ ಎಎಸ್ ಐ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲು ಎಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ.