ಮೈಸೂರು: ಮಾನವ ಹಕ್ಕುಗಳನ್ನ ರಕ್ಷಿಸಬೇಕಾದ ಪೊಲೀಸರೇ ಅದನ್ನ ಉಲ್ಲಂಘಿಸಿರುವ ಘಟನೆಯೊಂದು ನಡೆದಿದ್ದು, ಕಳ್ಳತನ ಆರೋಪದ ಮೇಲೆ ಯುವಕನನ್ನ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಆತನನ್ನ ನಾಲ್ಕು ದಿನಗಳ ಕಾಲ ಠಾಣೆಯಲ್ಲೇ ಕಾಲಿಗೆ ಕಬ್ಬಿಣದ ಸರಪಳಿಯಲ್ಲಿ ಹಾಕಿ ಕಟ್ಟಿ ಹಾಕಿದ ಅಮಾನವೀಯ ಘಟನೆ ನಗರದ ದೇವರಾಜ ಠಾಣೆಯಲ್ಲಿ ನಡೆದಿದೆ.
ನಗರದ ಗರುಡ ಮಾಲ್ ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ ಎಂಬ ಯುವಕ ಮಾರ್ಚ್ 6 ರಂದು ಅಂಗಡಿಗೆ ಬಟ್ಟೆ ಖರೀದಿ ಮಾಡಲು ಬಂದ ಮಹಿಳೆಯೊಬ್ಬಳು ಬಟ್ಟೆ ಖರೀದಿ ಮಾಡಿ ವ್ಯಾನಿಟಿ ಬ್ಯಾಗ್ ನ್ನ ಅಂಗಡಿಯಲ್ಲೇ ಬಿಟ್ಟು ಹೋಗಿದ್ದಾರೆ. ಅಲ್ಲಿಗೆ ಬಂದ ಗಿರೀಶ ಈ ವ್ಯಾನಿಟಿ ಬ್ಯಾಗ್ ಯಾರದ್ದು ಎಂದು ಕೇಳಿದ್ದು ಅದಕ್ಕೆ ಅಲ್ಲೇ ಬೇರೊಬ್ಬ ಮಹಿಳೆ ನನ್ನದು ಎಂದು ವ್ಯಾನಿಟಿ ಬ್ಯಾಗ್ ನ ತೆಗೆದುಕೊಂಡು ಪರಾರಿಯಾಗಿದ್ದಾಳೆ. ವ್ಯಾನಿಟಿ ಬ್ಯಾಗ್ ಕಳೆದುಕೊಂಡ ಮಹಿಳೆ ಮತ್ತೆ ಅಂಗಡಿಗೆ ಬಂದು ನನ್ನ ಬ್ಯಾಗ್ ಸಿಕ್ಕಿದೆಯಾ ಎಂದು ಕೇಳಿದ್ದಾಳೆ. ಅದಕ್ಕೆ ಗಿರೀಶ್ ಯಾರೋ ಒಬ್ಬ ಮಹಿಳೆ ಬ್ಯಾಗ್ ನನ್ನದು ಎಂದು ತೆಗೆದುಕೊಂಡು ಹೋದಳು ಎಂದು ಉತ್ತರಿಸಿದ್ದಾನೆ. ಇದರಿಂದ ಅನುಮಾನಗೊಂಡ ಬ್ಯಾಗ್ ಕಳೆದುಕೊಂಡ ಮಹಿಳೆ ಗಿರೀಶ್ ವಿರುದ್ದ ದೇವರಾಜ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಗಿರೀಶ್ ನನ್ನ ಮಾರ್ಚ್ 18 ರಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ತಪ್ಪು ಒಪ್ಪಿಕೋ ಎಂದು ಠಾಣೆಯ ಒಳಗಿನ ಹಾಲ್ ನಲ್ಲಿರುವ ಕಿಟಕಿಗೆ ಕಬ್ಬಿಣದ ಸರಪಳಿಯಿಂದ ನಾಲ್ಕು ದಿನಗಳ ಕಾಲ ಕಟ್ಟಿ ಹಾಕಿದ್ದು ಕೊನೆಗೆ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಗಿರೀಶ್ ಕುಟುಂಬಕ್ಕೆ 28 ಸಾವಿರ ಹಣ ನೀಡಿದರೆ ಯಾವುದೇ ಕೇಸ್ ದಾಖಲಿಸದೆ ಬಿಟ್ಟು ಬಿಡುವುದಾಗಿ ಹೇಳಿದ್ದು ಕೊನೆಗೆ ಗಿರೀಶ್ ಕುಟುಂಬದವರು ಸಾಲ ಮಾಡಿ 28 ಸಾವಿರ ಹಣವನ್ನ ಇನ್ಸ್ ಪೆಕ್ಟರ್ ಗೆ ನೀಡಿ ಗಿರೀಶನನ್ನ ಬಿಡಿಸಿಕೊಂಡು ಹೋದೆವು ಎನ್ನುತ್ತಾರೆ ಸೋದರ ಮಣಿಕಾಂತ.
ಪ್ರಕರಣ ದಾಖಲಾಗಿಲ್ಲ:
ನಾಲ್ಕು ದಿನ ವಿಚಾರಣೆಗೆಂದು ಕರೆದುಕೊಂಡ ಬಂದು ಯುವಕನನ್ನ ಅಕ್ರಮವಾಗಿ ಠಾಣೆಯಲ್ಲಿ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿದರು, ಯಾವುದೇ ಕೇಸ್ ದಾಖಲಿಸದೆ ಹಣ ಪಡೆದು ಬಿಟ್ಟಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ವಿರುದ್ದ ತನಿಖೆ ನಡೆಸಲಾಗುವುದೆಂದು ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಮಣೇಶ್ವರರಾವ್ ತಿಳಿಸಿದ್ದು, ಯುವಕನನ್ನ ಅಮನಾವೀಯವಾಗಿ ಪ್ರಾಣಿಗಳ ರೀತಿಯಲ್ಲಿ ಸರಪಳಿಯಲ್ಲಿ ಕಟ್ಟಿಹಾಕಿದ ಪ್ರಕರಣವನ್ನ ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಸಿದ್ದತೆ ಮಾಡಿಕೊಂಡಿದೆ.