ಮೈಸೂರು: ಕೊಲೆ ಕೇಸ್ ಸಂಬಂಧ ಜೈಲಿನಲ್ಲಿರುವ ಸ್ನೇಹಿತರಿಗೆ ಜಾಮೀನ್ ನ ಮೇಲೆ ಬಿಡುಗಡೆ ಮಾಡಿಸಲು ಹಣಕ್ಕಾಗಿ ಕೊಲೆಗೆ ಸುಫಾರಿ ಪಡೆದು ಹೊಂಚು ಹಾಕಿ ಕುಳಿತಿದ್ದ ನಾಲ್ವರ ಗುಂಪನ್ನ ಬಂಧಿಸಲು ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ಹೇಮಂತ ನಾಯಕ(25), ರಮೇಶ ಅಲಿಯಾಸ್ ಪಲ್ಲಿ(26) ಈತ ಕೊಲೆ ಕೇಸ್ ಸಂಬಂಧ ಜೈಲಿಗೆ ಹೋಗಿ ಜಾಮೀನ್ ನ ಮೇಲೆ ಹೊರಗೆ ಬಂದಿದ್ದಾನೆ, ಮುಖಂದ ಅಲಿಯಾಸ ಮಂಚ(26), ಕುಂಬಾರಕೊಪ್ಪಲಿನ ಪ್ರಶಾಂತ್ ಎನ್ನಲಾಗಿದ್ದು, ಇವರು ಗೋಕುಲಂನ ಸ್ಮಶನಾದ ಸಮೀಪ ಮದ್ಯರಾತ್ರಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾಗ ಗಸ್ತಿನಲ್ಲಿದ್ದ ಸಿಸಿಬಿ ಪೊಲೀಸರು ವಿಚಾರಿಸಲು ಮುಂದಾದಾಗ ಭಯಗೊಂಡು ಪರಾರಿಯಾಗಲು ಯತ್ನಿಸಿದಾಗ ಬೆನ್ನತ್ತಿದ್ದಾಗ ಮೇಲಿನ ನಾಲ್ಕು ಆರೋಪಿಗಳನ್ನ ಬಂಧಿಸಿದ್ದು ತಿರುಪತಿ ಹಾಗೂ ರಘು ಅಲಿಯಾಸ್ ಡಾಂಕಿ ಎಂಬುವವರು ಪರಾರಿಯಾಗಿದ್ದಾರೆ.
ಇವರು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ನೇಹಿತರಾದ ಕುಂಡ ಸೀನಾ, ಹೇಮಂತ ಕುಮಾರ್, ಮಂಜೇಶ ಎಂಬುವವರನ್ನ ಜಾಮೀನನ ಮೇಲೆ ಬಿಡುಗಡೆಗೊಳಿಸಲು ವಕೀಲರಿಗೆ ಹಣ ನೀಡಲು ಕೊಲೆಗೆ ಸುಫಾರಿ ಪಡೆದಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ದರೋಡೆ ನಡೆಸಲು ಹೊಂಚು ಹಾಕಿದ್ದು ಎಂದು ಪೊಲೀಸರಿಗೆ ತನಿಖೆ ದಿಕ್ಕನ್ನ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಸಿಸಿಬಿ ಅಧಿಕಾರಿ ಹೇಳಿದ್ದಾರೆ.
ಈ ನಾಲ್ಕು ಯುವಕರಿಂದ ಮಾರಕಾಸ್ತ್ರ ಹಾಗೂ ಖಾರದ ಪುಡಿಯನ್ನ ವಶ ಪಡಿಸಿಕೊಂಡು ಜೈಲಿಗೆ ಕಳುಹಿಸಲಾಗಿದ್ದು ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.