ಮೈಸೂರು: ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ನಿವಾಸಿ ರೈತ ಕೃಷ್ಣೇಗೌಡ(65) ಎಂಬುವರು ನಿನ್ನೆಯಷ್ಟೆ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಹಸಿರುವಾಗಲೇ ಮತ್ತೊಬ್ಬ ರೈತ ಸಾಲದಹೊರೆ ಹೊರಲಾರದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೇರ್ಯ ಸಮೀಪದ ಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಸ್ವಾಮಿಗೌಡ(60) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಇವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಇರುವ ಒಬ್ಬ ಮಗನೂ ಅಂಧನಾಗಿದ್ದಾನೆ. ಮೃತ ರೈತ ಸ್ವಾಮೀಗೌಡ ತನ್ನ ಮೂರು ಎಕರೆ ಜಮೀನಿನಲ್ಲಿ ತೆಂಗು, ಸೇವಂತಿ ಬೆಳದುದ್ದು, ಬೆಳೆ ಒಣಗುತ್ತಿದ್ದರಿಂದ ಹೇಗಾದರು ಮಾಡಿ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೊಳವೆ ಬಾವಿ ಕೊರೆಸಿದ್ದರಾದರೂ ಸಮರ್ಪಕವಾಗಿ ಮಳೆಯಾಗದ ಕಾರಣದಿಂದ ಕೊಳವೆಬಾವಿಯಲ್ಲಿ ನೀರೆ ಬರಲಿಲ್ಲ. ಆದುದರಿಂದ ನಾಲ್ಕೈದು ಕೊಳವೆ ಬಾವಿ ಕೊರಸಿದರೂ ಯಾವುದರಲ್ಲೂ ನೀರು ಬಾರದೆ ಮೂರ್ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿತ್ತು.
ಹೀಗಾಗಿ ಕೊಳವೆ ಬಾವಿ ಕೊರೆಸಲು ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಸಂಕಷ್ಟಕ್ಕೊಳಗಾಗಿದ್ದರು. ಈ ನಡುವೆ ಸಾಲಗಾರರು ಹಣವನ್ನು ಮರಳಿಸುವಂತೆ ಒತ್ತಾಯಿಸುತ್ತಿದ್ದರಿಂದ ಬೇಸತ್ತ ಅವರು ಶನಿವಾರ ಮುಂಜಾನೆ ಮನೆಯ ಮುಂದೆ ಇರುವ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸ್ಥಳಕ್ಕೆ ಸಾಲಿಗ್ರಾಮ ಸಬ್ಇನ್ಸ್ಪೆಕ್ಟರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ನೀಡಿದ್ದಾರೆ.