ಮೈಸೂರು: ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ವಾರಾಂತ್ಯದಲ್ಲಿ, ಕೆಆರ್ ಎಸ್ ನ ಬೃಂದಾವನ, ಬಲಮುರಿ, ಶ್ರೀರಂಗಪಟ್ಟಣ, ಶಿವನಸಮುದ್ರ ಹೀಗೆ ನೀರಿರುವ ತಾಣಗಳಿಗೆ ತೆರಳಿ ಒಂದಷ್ಟು ಹೊತ್ತು ನೀರಲ್ಲಿ ಆಡಿ ಬರೋಣ ಎನ್ನುತ್ತಿದ್ದ ನಗರವಾಸಿಗಳಿಗೆ ಈ ಬಾರಿ ನಿರಾಸೆಯಾಗುತ್ತಿದೆ. ಕಾರಣ ಎಲ್ಲಿಯೂ ನೀರಿಲ್ಲ.
ಬಿಸಿಲಿನ ಝಳಕ್ಕೆ ಎಲ್ಲೆಡೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನದಿಗಳಲ್ಲಿ ಬಂಡೆಗಳಷ್ಟೆ ಕಾಣುತ್ತಿದೆ. ಜಲಪಾತಗಳು ನೀರಿಲ್ಲದೆ ಸೊರಗಿವೆ. ಹೀಗಾಗಿ ಬೇಸಿಗೆಯ ಬಿಸಿಲ ನಡುವೆ ಯಾವುದಾದರೂ ನೀರಿರುವ ಸ್ಥಳಗಳಿಗೆ ಹೋಗಿ ಒಂದಷ್ಟು ಹೊತ್ತು ಇದ್ದು ಬರೋಣ ಎನ್ನುತ್ತಿದ್ದವರು ಈಗ ತೆಪ್ಪಗೆ ಕೂರುವಂತಾಗಿದೆ. ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಮುಂಭಾಗ ಕ್ರಸ್ಟ್ಗೇಟುಗ ನೀರು ಹರಿಯುತ್ತಿಲ್ಲ. ಮೊದಲೆಲ್ಲ ಸದಾ ನೀರು ಹರಿದು ಬರುತ್ತಿತ್ತು. ಈಗ ನೀರನ್ನೇ ನೋಡಲಾಗುತ್ತಿಲ್ಲ. ಸದ್ಯ ಅಲ್ಲಿಗೆ ತೆರಳುವ ಮಂದಿ ಬೃಂದಾವನದಲ್ಲಿ ಅಡ್ಡಾಡಿಕೊಂಡು ಬರುತ್ತಿದ್ದಾರೆ. ಇನ್ನು ಮಕ್ಕಳು, ಮಹಿಳೆಯರು, ಕುಟುಂಬದೊಂದಿಗೆ ಶ್ರೀರಂಗಪಟ್ಟಣದ ಬಲಮುರಿಗೆ ತೆರಳುತ್ತಿದ್ದರು. ಆದರೆ ಬಲಮುರಿಯ ಸ್ಥಿತಿ ಚಿಂತಾಜನಕವಾಗಿದೆ.
ಇಲ್ಲಿ ಜಲಧಾರೆಯಾಗಿ ಧುಮುಕುತ್ತಾ ನೋಡುಗರ ಕಣ್ಮನ ಸೆಳೆಯುತ್ತಿದ್ದ ಕಾವೇರಿ ಸೊರಗಿ ಹೋಗಿದ್ದಾಳೆ. ಹೀಗಾಗಿ ಅಲ್ಲಿ ಇರುವ ನೀರಲ್ಲಿ ಕಲ್ಲು ಬಂಡೆಗಳ ಮೇಲೆ ಕುಳಿತುಕೊಂಡು ಹ್ಯಾಪಮೊರೆ ಹಾಕಿಕೊಂಡು ಬರಬೇಕಾಗಿದೆ. ಇಲ್ಲಿಗೆ ವಾರದ ಕೊನೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿ ನೀರಲ್ಲಿ ಆಟವಾಡುವುದರೊಂದಿಗೆ ಪ್ರಕೃತಿಯ ರಮಣೀಯ ದೃಶ್ಯವನ್ನು ಆಸ್ವಾದಿಸಿ ಒಂದಷ್ಟು ಹೊತ್ತು ಇದ್ದು ಹೋಗುತ್ತಿದ್ದರು. ಈಗ ಬರುವವರ ಸಂಖ್ಯೆ ಕುಗ್ಗಿದೆ. ಶ್ರೀರಂಗಪಟ್ಟಣದಲ್ಲಿ ಪಶ್ಚಿಮವಾಹಿನಿ, ಸಂಗಮ, ಗೋಸಾಯ್ ಘಾಟ್, ನಿಮಿಷಾಂಭ ದೇವಿ ದೇವಾಲಯದ ಬಳಿಯ ಸ್ನಾನ ಘಟ್ಟಗಳು, ಮಹದೇವಪುರ, ರಾಮಸ್ವಾಮಿ ಅಣೆಕಟ್ಟೆ, ಶಿಂಷಾ, ಶಿವನಸಮುದ್ರ, ಶಿವ ಅಣೆಕಟ್ಟೆ, ಮುತ್ತತ್ತಿ ಮೊದಲಾದವುಗಳಿಗೆ ಹೆಚ್ಚಿನ ಜನ ನೀರಲ್ಲಿ ಆಡಲೆಂದೇ ಬರುತ್ತಿದ್ದರು.
ಪಟ್ಟಣದ ಮಂದಿ ಮಕ್ಕಳನ್ನು ಕರೆದುಕೊಂಡು ಬಂದು ಅವರನ್ನು ತಣ್ಣೀರಿನಲ್ಲಿ ಸ್ನಾನ ಮಾಡಿಸಿ ತಾವು ಮಾಡಿ ಖುಷಿ ಪಡುತ್ತಿದ್ದರು. ಈ ಬಾರಿ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ. ಇನ್ನು ಕೆರೆಗಳಲ್ಲಿಯೂ ನೀರಿಲ್ಲದಾಗಿದೆ. ಹಣ ಇರುವವರು ಬೇಸಿಗೆ ಮಜಾ ಕಳೆಯಲು ಖಾಸಗಿ ಸ್ಥಳವಾದ ವಂಡರ್ಲಾಕ್ಕೆ ತೆರಳುತ್ತಾರೆ. ಹಣ ಇಲ್ಲದವರು ನೈಸರ್ಗಿಕವಾಗಿ ನೀರು ಹರಿಯುವ ಸ್ಥಳಗಳಿಗೆ ಬಂದು ಒಂದಷ್ಟು ಹೊತ್ತು ನೀರಿನಲ್ಲಿ ಆಟವಾಡಿ ಹೋಗುತ್ತಾರೆ. ಈ ಬಾರಿಯ ಬೇಸಿಗೆಯಲ್ಲಿ ಎಲ್ಲವೂ ಬಂದ್ ಆಗಿದೆ. ಬರದ ಹಿನ್ನಲೆಯಲ್ಲಿ ಎಲ್ಲೆಡೆ ನೀರಿಗೆ ಹಾಹಾಕಾರ ಬಂದಿದೆ. ಗ್ರಾಮಗಳ ನಡುವೆ ಇರುವ ನಾಲೆಗಳಲ್ಲೂ ನೀರಿಲ್ಲದಾಗಿದೆ. ನದಿಗಳಲ್ಲಿ ಈಜುವುದಿರಲಿ, ಕೈಕಾಲು ತೊಳೆಯಲು ಕೂಡ ನೀರಿಲ್ಲದಾಗಿದೆ. ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಬಹುಶಃ ಮತ್ತೆ ಎಂದಿನಂತೆ ನೀರು ಹರಿದು ಮುಂದಿನ ಬೇಸಿಗೆಯಲ್ಲಿ ಹೊಳೆ, ನದಿಗಳಲ್ಲಿ ನೀರಾಟ ಆಡಲು ಸಾಧ್ಯವಾಗಬಹುದೇನೋ.