ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಭಾವಚಿತ್ರ ಅಶ್ಲೀಲ ವೆಬ್ಸೈಟ್ ಗೆ ಅಪ್ಲೋಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ವಿಭಾಗವೊಂದರ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಭಾವಚಿತ್ರವೇ ಈ ರೀತಿ ದುರ್ಬಳಕೆಯಾಗಿರುವುದು. ಕಳೆದ ಕೆಲ ದಿನಗಳಿಂದ ಈ ವಿದ್ಯಾರ್ಥಿನಿಯರ ಮೊಬೈಲ್ ಫೋನ್ ಗೆ ಅನಾಮಧೇಯ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಬರ ತೊಡಗಿದವು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು, ಇದರ ಹಿನ್ನೆಲೆ ಬೆನ್ನಟ್ಟಿದಾಗ ಅಶ್ಲೀಲ ವೆಬ್ ಸೈಟ್ ಒಂದಕ್ಕೆ ಇವರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಅಪ್ಲೋಡ್ ಮಾಡಿರುವುದು ತಿಳಿಯಿತು.
ಇದರಿಂದ ಆತಂಕಗೊಂಡ ಈ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ತರಗತಿಗೆ ಹಾಜರಾಗುತ್ತಿದ್ದಂತೆ ವಿಭಾಗದ ಮುಖ್ಯಸ್ಥರನ್ನು ಭೇಟಿಯಾಗಿ ಈ ಬಗ್ಗೆ ಅಳಲು ತೋಡಿಕೊಂಡರು. ವಿದ್ಯಾರ್ಥಿನಿಯರ ಖಾಸಗಿ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಹಾಗೂ ಸಂದೇಶ ಬರುತ್ತಿರುವುದರಿಂದ ಇದು ವಿದ್ಯಾರ್ಥಿನಿಯರನ್ನು ಬಲ್ಲವರೇ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವಿದ್ಯಾರ್ಥಿನಿಯರ ದೂರು ಆಲಿಸಿದ ವಿಭಾಗದ ಮುಖ್ಯಸ್ಥರು, ಮೈಸೂರು ವಿವಿ ಕುಲಸಚಿವರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂಬಂಧ ಮಾತನಾಡಿದ ಮೈಸೂರು ವಿವಿ ಕುಲಸಚಿವ ಪ್ರೊ.ರಾಜಣ್ಣ, ವಿಭಾಗದ ಮುಖ್ಯಸ್ಥರು ದೂರವಾಣಿ ಮೂಲಕ ಘಟನೆ ಬಗ್ಗೆ ತಿಳಿಸಿದರು. ಆಗ ಆ ವಿದ್ಯಾರ್ಥಿನಿಯರಿಗೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದೆ ಎಂದರು.