ಮೈಸೂರು: ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಮಾಜಿ ಸಂಸದ ಹೆಚ್.ವಿಶ್ವನಾಥ್ ಭಾವಚಿತ್ರಗಳನ್ನು ಕಸದ ರಾಶಿಗೆ ಎಸೆದು ಮೈಸೂರು ಜಿಲ್ಲಾ ಪಂಚಾಯತಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಧರಂಸಿಂಗ್ ಹಾಗೂ ಸಚಿವ ಮತ್ತು ಸಂಸದರಾಗಿ ಆಡಳಿತ ನಡೆಸಿದ ಹೆಚ್.ವಿಶ್ವನಾಥ್ ಅವರ ಭಾವಚಿತ್ರಗಳನ್ನು ಹೊರಹಾಕಿ ಅಪಮಾನ ಮಾಡಲಾಗಿದೆ. ಜಿ.ಪಂ.ನಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆಯಲ್ಲಿರುವುದರಿಂದ ಇಂತಹ ಅಚಾತುರ್ಯಗಳು ನಡೆದಿದೆಯೇ ಎಂಬ ಅನುಮಾನ ಕಾಂಗ್ರೆಸ್ ಕಾರ್ಯಕರ್ತರಿಗೆ ಮೂಡಿದೆ.
ಅಲ್ಲದೆ ಮಂಗಳವಾರ ಜಿ.ಪಂನಲ್ಲಿ ಅಧ್ಯಕ್ಷೆ ನಯೀಮಾ ಸುಲ್ತಾನ್ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ ಮಂಡನೆ ನಂತರ ಕಾಂಗ್ರೆಸ್ ಪಕ್ಷದ ಸದಸ್ಯರು ಜಿ.ಪಂ ಅಧಿಕಾರಿಗಳನ್ನು ಹಾಗೂ ಜೆಡಿಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಮಾಜಿ ಸಂಸದ ಹೆಚ್. ವಿಶ್ವನಾಥ್ ರ ಮಗ ಅಮಿತ್ ದೇವರಹಟ್ಟಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.