ಮೈಸೂರು: ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆಯ ಸೈನಿಕರ ಮೇಲೆ ಕೆಲವು ಪ್ರತ್ಯೇಕವಾದಿ ಕಾಶ್ಮೀರದ ದುಷ್ಟರು ಕಲ್ಲೆಸೆದು ಅವರನ್ನು ಥಳಿಸುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಚಾಲಕ ಪ್ರಭಾಕರ್ ಮಾತನಾಡಿ, ಭಾರತೀಯ ಸೇನೆಗೆ ಸೇರಿ ಸಂಪೂರ್ಣ ಬೆಂಬಲ ಸೂಚಿಸುತ್ತಾ ರಾತ್ರಿ ಹಗಲು ಎನ್ನದೇ ದೇಶ ಕಾಯುತ್ತಿದ್ದಾರೆ. ಭಾರತೀಯ ಸೇನೆಯ ಸೈನಿಕರ ಮೇಲೆ ಕೆಲವು ಪ್ರತ್ಯೇಕವಾದಿ ಕಾಶ್ಮೀರದ ದುಷ್ಟರು ಕಲ್ಲೆಸೆದು ಅವರನ್ನು ಥಳಿಸುತ್ತಿರುವುದು ಖಂಡನೀಯ. ಆದ್ದರಿಂದ ರಾಜ್ಯ ಸರ್ಕಾರ ಸೈನಿಕರಿಗೆ ತಮ್ಮ ಸ್ವರಕ್ಷಣೆಗೆ ಅಗತ್ಯ ಬಲ ಪ್ರಯೋಗಕ್ಕೆ ಪೂರ್ಣಧಿಕಾರ ಕೊಡಬೇಕು, ಭಾರತೀಯ ಸೈನಿಕರ ಮೇಲೆ ಯಾವ ದಾಳಿಯೂ ಮಾಡದಂತೆ ಸ್ಪಷ್ಟ ಸಂದೇಶ ರವಾನಿಸಬೇಕು. ಕಾಶ್ಮೀರದಲ್ಲಿ ಪಾಕಿಸ್ತಾನದ ಬಾಹ್ಯ ಹಸ್ತಕ್ಷೇಪ ನಿಲ್ಲಿಸಲು ಪ್ರಾದೇಶಿಕ ತುರ್ತು ಪರಿಸ್ಥಿತಿ ಹೇರಬೇಕು. ನಮ್ಮ ಧೋರಣೆ ಹಾಗೂ ಬೇಡಿಕೆಗಳನ್ನು ರಾಷ್ಟ್ರಪತಿಯವರಿಗೆ ಪತ್ರ ಬರೆಯುವ ಮುಖೇನ ಆಗ್ರಹ ಪಡಿಸುತ್ತೇವೆ. ದೇಶದೊಳಗೆ ಯಾವುದೇ ಸೈನಿಕರಿಗೆ ಹಿಂಸೆ, ಪ್ರಾಣ ಹಾನಿಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.