ಮೈಸೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಮೈಸೂರು ಪ್ರಗತಿಪರ ಸಂಘಟನೆಗಳ ವತಿಯಿಂದ ಮೇ 4ರಂದು ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ನೆನಪಿನ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಪ್ರಪ್ರಥಮ ಸ್ವಾತಂತ್ರ್ಯ ಸೇನಾನಿ ಟಿಪ್ಪು ವೀರಮರಣನಪ್ಪಿ 218 ವರ್ಷಗಳು ಕಳೆದಿವೆ. ಈ ಸಂದರ್ಭದ ಹಿನ್ನಲೆಯಲ್ಲಿ ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರು ಅಂದು ಬೆಳಿಗ್ಗೆ 9.30ಕ್ಕೆ, ಶ್ರೀರಂಗಪಟ್ಟಣದ ಟಿಪ್ಪು ಹುತಾತ್ಮನಾದ ಸ್ಥಳದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಗೌರವ ಸಲ್ಲಿಸುತ್ತಾರೆ.
ಸಮಾರಂಭದಲ್ಲಿ ರಾಜ್ಯ ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಗುರುಪ್ರಸಾದ್ ಕೆರೆಗೋಡು, ಭಾರತೀಯ ಕಮ್ಯುನಿಷ್ಟ್ ಪಕ್ಷದ ಮುಖಂಡ ರಾಧಾ ಸುಂದರೇಶ್ ಮತ್ತು ಡಾ.ಸುಜಯ್ ಪಾಲ್ಗೊಳ್ಳಲಿದ್ದಾರೆ. ನಂತರ ಮಾಜಿ ಸಚಿವ ಬಿ.ಟಿ.ಲಲಿತಾ ನಾಯ್ಕ್ ಬೆಳಿಗ್ಗೆ 10.30ಕ್ಕೆ ಮೈಸೂರಿನ ಟೌನ್ ಹಾಲ್ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಬೃಹತ್ ಬಹಿರಂಗ ಸಮಾವೇಶದಲ್ಲಿ ನಾಡಿನ ಹಿರಿಯ ಚಿಂತಕ ಎ.ಕೆ.ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ದೇವನೂರು ಮಹಾದೇವ, ಬೆಟ್ಟಯ್ಯ ಕೋಟೆ, ಕಾಳೇಗೌಡ ನಾಗವಾರ, ಗೌರಿ ಲಂಕೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಬಂಜಗೆರೆ ಜಯಪ್ರಕಾಶ್, ಮಲ್ಲೇಶ್ ಪಾಲ್ಗೊಳ್ಳಲಿದ್ದಾರೆ. ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಸಮಾವೇಶದಲ್ಲಿ ನಾಡಿನ ಪ್ರಗತಿಪರ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 2.30 ಕ್ಕೆ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ, ಆಧುನಿಕ ಕರ್ನಾಟಕದ ನಿರ್ಮಾಣ ಮತ್ತು ಟಿಪ್ಪು ಸ್ತುಲಾನ್’ ಮತ್ತು ಮ.3.30 ಕ್ಕೆ ‘ಶೂದ್ರ, ದಲಿತ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಟಿಪ್ಪು ಕೊಡುಗೆ’ ಎಂಬ ವಿಷಯಗಳ ವಿಚಾರಗೋಷ್ಠಿ ಇರುತ್ತದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಚಿಂತಕ ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಕುರಿತು ಚಿತ್ರ ಪ್ರದರ್ಶನ, ಸೌಹಾರ್ದ ಕಲಾತಂಡದಿಂದ ಟಿಪ್ಪು ಲಾವಣಿಗಳ ಗಾಯನ, ಜಾನಪದ ಕಲಾತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.