ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ನವೀಕರಣ ಕುರಿತು ಜೂನ್ 21 ರಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು ಮಾನ್ಯತೆ ಸಿಗುವ ಸಾಧ್ಯತೆಗಳಿದೆ ಎಂದು ಮೂಲಗಳು ಖಚಿತ ಪಡಿಸಿವೆ.
ಈ ಮಹತ್ವದ ಸಭೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೆ ಶರ್ಮ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವಿವಿ ಕುಲಪತಿ ಪ್ರೊ.ಡಿ ಶಿವಲಿಂಗಯ್ಯ, ಕುಲಸಚಿವ ಚಂದ್ರಶೇಖರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಯುಜಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
2017-18ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ನೀಡಬೇಕು, 2013-14 ಹಾಗೂ 2014-15ನೇ ಸಾಲಿನ 96 ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನೋಂದಣಿಯಾದ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಎಂದು ಈಗಾಗಲೇ ವಿ.ವಿ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಪತ್ರ ಸಹ ಬರೆದಿದ್ದು, 2013ನೇ ಸಾಲಿನಿಂದ ಕೆಎಸ್ಒಯು ಕೋರ್ಸ್ ಗಳಿಗೆ ಮಾನ್ಯತೆಯನ್ನ ಯುಜಿಸಿ ರದ್ದುಪಡಿಸಿದ ಪರಿಣಾಮ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಆತಂಕಗೊಂಡಿದ್ದರು.
ಈ ಬಗ್ಗೆ ಕುಲಪತಿ ಶಿವಲಿಂಗಯ್ಯ ಮಾತನಾಡಿ, ಯುಜಿಸಿ ಕೇಳಿರುವ ಎಲ್ಲಾ ದಾಖಲೆ, ಪ್ರಮಾಣ ಪತ್ರಗಳನ್ನು ನೀಡಿದ್ದೇವೆ. ಯುಜಿಸಿ ಹೇಳಿದ್ದ ಎಲ್ಲಾ 21 ಷರತ್ತುಗಳನ್ನು ಒಪ್ಪಿದ್ದೇವೆ. ಬಿಇ ಪದವಿಯಂತಹ ತಾಂತ್ರಿಕ ಕೋರ್ಸ್ ಗಳನ್ನು ಹೊರತು ಪಡಿಸಿ ಉಳಿದ ಕೋರ್ಸ್ ಗಳಿಗೆ ಆಯೋಗವು ಒಂದು ತಿಂಗಳೊಳಗಾಗಿ ಮಾನ್ಯತೆ ನೀಡುವ ವಿಶ್ವಾಸವಿದೆ. ನಮ್ಮ ಮೂರು ಬೇಡಿಕೆಗಳ ಪೈಕಿ ಕನಿಷ್ಟ 2017-18ನೇ ಸಾಲಿಗೆ ಮಾನ್ಯತೆ ನೀಡಬಹುದು ಎಂಬ ಭರವಸೆ ಇದೆ. ಉಳಿದ ಬೇಡಿಕೆಗಳನ್ನೂ ಈಡೇರಿಸಲು ಒತ್ತಾಯಿಸಲಾಗುವುದು ಈ ಬಾರಿ ಸಕರಾತ್ಮಕ ಪ್ರತಿಕ್ರಿಯೆ ಬರುವ ನೀರಿಕ್ಷೆ ಇದೆ ಎಂದು ತಿಳಿಸಿದರು.