ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ರಾಜ್ಯದಲ್ಲೇ ಪ್ರಪ್ರಥಮವಾಗಿ ಭರ್ತಿಯಾಗುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಸಹಿತ ಬಾಗಿನ ಅರ್ಪಿಸಿದರು.
ಇದೇ ವೇಳೆ ಶಾಸಕ ಸಿ.ಅನಿಲ್ಕುಮಾರ್ ಅವರು ಸಿಎಂ ಅವರನ್ನು ಸನ್ಮಾನಿಸಿದರು. ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಚಿವ ಎನ್.ಮಹೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು.
ಇನ್ನು ಕಬಿನಿ ಜಲಾಶಯದ ಎಇಇ ಪುಟ್ಟಶೇಷಗಿರಿ ಅವರನ್ನೇ ಪೊಲೀಸರು ತಡೆದದ್ದು ಕಂಡು ಬಂತು. ಸರ್ಕಾರಿ ವಾಹನದಲ್ಲಿ ಬಂದು ಜಲಾಶಯಕ್ಕೆ ಮುಖ್ಯಮಂತ್ರಿಗಳು ಬರುತ್ತಾರೆ. ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಿದೆ. ಒಳ ಹೋಗಲು ಬಿಡಿ ಎಂದರೆ ಬಿಡಲಿಲ್ಲ. ಅಲಂಕಾರ ಮತ್ತಿತರ ಕಾರ್ಯಕ್ರಮದ ನಿಮಿತ್ತ ಜಲಾಶಯದ ಒಳಗೆ ಮತ್ತು ಹೊರಗೆ ಹೋಗಿ ಬರಲು ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು ಕಂಡುಬಂತು.
ಜಲಾಶಯಕ್ಕೆ ಬಾಳೆಕಂಬ, ಮಾವಿನ ತೋರಣಗಳಿಂದ ಅಲಂಕಾರ ಮಾಡಿದ್ದು, ಮುಖ್ಯಮಂತ್ರಿಗಳನ್ನು ಮಂಗಳ ವಾದ್ಯದೊಂದಿಗೆ ಸ್ವಾಗತಿಸಲಾಯಿತು.