ಹುಣಸೂರು: ಆಕ್ಸಿಸ್ ಬ್ಯಾಂಕ್ ಶಾಖೆಗೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುತ್ತಿಗೆ ಹಾಕಿ ಕೆಲ ಕಾಲ ಬಂದ್ ಮಾಡಿಸಿ, ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದ್ದು, ಆ ನಂತರ ಉಪತಹಸೀಲ್ದಾರ್ ಗುರುರಾಜ್ರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲೂಕು ರಾಜ್ಯ ರೈತ ಸಂಘದ ಅಧ್ಯಕ್ಷ ಬೆಟ್ಟೆಗೌಡ ಅವರು ಮಾತನಾಡಿ, ಬ್ಯಾಂಕಿನವರು ಬಡ ರೈತರಿಗೆ ನೋಟಿಸ್ ನೀಡಿ ಅರೆಸ್ಟ್ ವಾರೆಂಟ್ ಮುಖಾಂತರ ಬಂಧಿಸಲು ಮುಂದಾಗಿರುವುದು ಖಂಡನೀಯ. ಅಮಾಯಕ ರೈತರನ್ನು ಆಕ್ಸಿಸ್ ಬ್ಯಾಂಕ್ ನಗರದ ಇನ್ನೂ ಕೆಲವು ಬ್ಯಾಂಕ್ಗಳು ರೈತರಿಗೆ ಕೋರ್ಟ್ ಮುಖಾಂತರ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿವೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಬೆಳಗಾವಿಯಲ್ಲಿ 185 ಜನ ರೈತರಿಗೆ ಆಕ್ಸಿಸ್ ಬ್ಯಾಂಕಿನವರು ಅರೆಸ್ಟ್ ವಾರೆಂಟ್ ಮುಖಾಂತರ ಬಂಧಿಸಲು ಮುಂದಾಗಿರುವುದು ಖಂಡನೀಯ. ಮಲ್ಯ, ನೀರವ್ ಮೋದಿ ಅಂತಹವರು ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಅಂಥವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳದೆ ಅಮಾಯಕ ರೈತರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕೃಷ್ಣಕುಮಾರ್ ಮಾತನಾಡಿ, ಆಕ್ಸಿಸ್ ಬ್ಯಾಂಕ್ ವಿರುದ್ಧ ರಾಜ್ಯಾದ್ಯಂತ ಮುಷ್ಕರ ನಡೆಯುತ್ತಿದೆ. ರೈತರು ಬ್ಯಾಂಕಿನ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆಯಂತಹ ಕೆಲಸಕ್ಕೆ ಮುಂದಾಗದೆ ರೈತರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ರೈತರು ಸಂಘಟಿತರಾಗಬೇಕು. ದೇಶದ ಉಸಿರು ರೈತ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡದೆ, ಸುಳ್ಳು ಭರವಸೆ ನೀಡಿ ರೈತಾಪಿ ವರ್ಗದವರಿಗೆ ಮೋಸ ಮಾಡುತ್ತಿದೆ. ಆಕ್ಸಿಸ್ ಬ್ಯಾಂಕ್ ಹಾಗೂ ರೈತರ ವಿರುದ್ಧ ಕೆಲಸ ಮಾಡುವವರಿಗೆ. ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪತಹಶೀಲ್ದಾರ್ ಗುರುರಾಜ್ ಮನವಿ ಸ್ವೀಕರಿಸಿ ಮಾತನಾಡಿ ರೈತರ ಮನವಿ ಹಿರಿಯ ಅಧಿಕಾರಿಗಳ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಗುವುದು. ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಲಿಯಾಗದೆ ತಾಳ್ಮೆಯಿಂದ ಇರಬೇಕೆಂದರು.