ಮಂಡ್ಯ: ಟಿಪ್ಪು ಜಯಂತಿ ಆಚರಣೆ ಸಂಬಂಧ ನಗರದಲ್ಲಿ ಗುರುವಾರ ಕರೆದಿದ್ದ ಶಾಂತಿ ಸಭೆಯಲ್ಲೇ ಅಶಾಂತಿ ಸೃಷ್ಟಿಯಾಯಿತು. ಪರಿಣಾಮ ಪೊಲೀಸರ ಬೆಲೆ ಏನೆಂದು ತಿಳಿಸಬೇಕಾ? ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್ ಖಡಕ್ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕಚೇರಿಯ ಸಭಾಂಗಣದಲ್ಲಿ ಎಸ್ಪಿ ಡಿ.ಶಿವಪ್ರಕಾಶ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಆದರೆ, ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುವ ಜತೆಗೆ ಸಭೆಯಲ್ಲಿದ್ದ ಕೆಲವು ಮುಸ್ಲಿಂ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಸಭೆಯಲ್ಲಿ ಗದ್ದಲ ಉಂಟಾಗಿ ಅಶಾಂತಿ ಸೃಷ್ಟಿಯಾಯಿತು.
ಇದರಿಂದ ಕೋಪಗೊಂಡ ಎಸ್ಪಿ ಶಿವಪ್ರಕಾಶ್, ಪೊಲೀಸರ ಎದುರು ಜಗಳವಾಡುವ ಉದ್ದೇಶವೇನಾದರು ಇದ್ದರೆ, ಅಂತಹವರು ಮೇಲೆದ್ದು ನಿಲ್ಲಿ, ಎಸ್‍ಪಿ ಕಚೇರಿಗೆ ಬಂದು ಕೂಗಾಡಿದರೆ ಪೊಲೀಸರ ಬೆಲೆ ಏನೆಂದು ತಿಳಿಸಬೇಕಾಗುತ್ತದೆ ಎಂದರು.
ಶಾಂತಿ ಸಭೆಯಲ್ಲಿ ಅಶಾಂತಿ
ಸರ್ಕಾರದ ಆದೇಶದ ಅನ್ವಯ ನ.10ರಂದು ನಗರ ಅಂಬೇಡ್ಕರ್ ಭವನದಲ್ಲಿ ನಡೆಯುವ ಟಿಪ್ಪುಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಏರ್ಪಡಿಸಿದ್ದ ಶಾಂತಿ ಸಭೆ ಟಿಪ್ಪು ಜಯಂತಿ ಆಚರಣೆ ಕುರಿತು ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿ ಮಾರ್ಪಟ್ಟಿತು.
ಸಭೆಯ ಪ್ರಾರಂಭದಲ್ಲೇ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಮಾತನಾಡಿ, ನ.20ರಂದು ಜನಿಸಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಬಹುಸಂಖ್ಯಾತ ಹಿಂದೂ ಧರ್ಮೀಯರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಚರಣೆ ಮಾಡುತ್ತಿರುವುದು ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಹುನ್ನಾರವಾಗಿದೆ. ಟಿಪ್ಪುವಿನ ಖಡ್ಗದ ಮೇಲೆ ಬರೆದಿರುವ ಅನ್ಯ ಧರ್ಮವಿರೋಧಿ ಬರಹವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗಪಡಿಸಿ ಜಯಂತಿ ಆಚರಣೆ ಮಾಡಬೇಕು. ಈ ಸಂಬಂಧ ಬಿಜೆಪಿ ಪಕ್ಷ ಜಯಂತಿಯನ್ನು ವಿರೋಧಿಸಲಿದೆ ಎಂದು ಸಭೆಯನ್ನು ಬಹಿಷ್ಕರಿಸಿ ಬಿಜೆಪಿ ಕಾರ್ಯಕರ್ತರೊಂದಿಗೆ ಹೊರ ನಡೆದರು.