ಮೈಸೂರು: ಚುನಾವಣೆಯಲ್ಲಿ ಮತದಾರರು ಮತದಾನ ಮಾಡಿ ಎಂದು ಹೇಳುವ ಪರಿಸ್ಥಿತಿಗೆ ನಮ್ಮ ದೇಶ ಇತ್ತೀಚಿನ ದಿನಗಳಲ್ಲಿ ತಲುಪಿದ್ದು, ಮತದಾನದ ಹಕ್ಕು ಬಳಸಿ ಮತದಾರರು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಆಗ ನಮ್ಮ ಹಕ್ಕಿಗೆ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ ಎಂದು ನಟ ಮಂಡ್ಯ ರಮೇಶ್ ಹೇಳಿದರು.
2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮೈಸೂರು ಮಹಾನಗರಪಾಲಿಕೆ ಸಹಯೋಗದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ 3 ಕಿ.ಮೀ ಓಟದ ಮ್ಯಾರಥಾನ್ ಕಾರ್ಯಕ್ರಮಕ್ಕೆ ವಿಶ್ರಾಂತ ಕುಲಪತಿ ಪ್ರೊ. ಶೇಖ್ ಆಲಿ ಅವರು ಚಾಲನೆ ನೀಡಿದರು.
ಜಿಲ್ಲಾ ಸ್ವೀಪ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ ಅವರು ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದವರಿಗೆ ಚುನಾವಣಾ ಪ್ರತಿಜ್ಞಾವಿಧಿಯನ್ನು ಬೋಧಿಸಿ ಯುವ ಮತದಾರರಾದ ನೀವೆಲ್ಲ ಜಾಗೃತರು. ಹೊಸ ಮತದಾರರಿಗೆ ಅಭಿನಂದನೆ ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಿ ಆ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಮ್ಯಾರಥಾನ್‍ನಲ್ಲಿ ಕಾವಾ ಕಾಲೇಜು ವಿದ್ಯಾರ್ಥಿಗಳು, ಯುವಜನ ಮತ್ತು ಕ್ರೀಡಾ ಇಲಾಖೆ ಕ್ರೀಡಾಪಟುಗಳು, ಮೈಸೂರು ವಿಶ್ವ ವಿದ್ಯಾನಿಲಯದ ಕ್ರೀಡಾಪಟುಗಳು ಮೈಸೂರು ರನ್ನರ್ಸ್ ಹಾಗೂ ಸಾರ್ವಜನಿಕರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅರಮನೆಯಿಂದ ಹೊರಟ ಮ್ಯಾರಥಾನ್ ಓಟ ಟೌನ್ ಹಾಲ್‍ನಲ್ಲಿ ಅಂತ್ಯ ವಾಯಿತು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಸಂದೀಪ್ ಕುಮಾರ್ ಮಿಶ್ರ ಹಾಗೂ ಸೂರಜ್ ಕುಮಾರ್ ಗುಪ್ತ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡ ಮಾದವ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಾಲಕೃಷ್ಣ, ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಹಾಗೂ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಪ್ರೊ.ಕೃಷ್ಣೇಗೌಡ, ಅಥ್ಲೇಟಿಕ್ ರಮ್ಯ, ಯೋಗಪಟು ವಿಜೇತೆ ಖುಷಿ, ನಟಿಯರಾದ ಸುಧಾ ಬೆಳವಾಡಿ, ಸಂಯುಕ್ತ ಹೊರ್ನಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.