ಮೈಸೂರು: ಗುರುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಮೈಸೂರು ನಗರ ಹಾಗೂ ಜಿಲ್ಲೆಯ ಹಲವೆಡೆ ಮಳೆ ಸುರಿದಿದ್ದು, ಜನ ಬೆಚ್ಚಿ ಬೀಳುವಂತೆ ಮಾಡಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಿಂಚು, ಗುಡುಗು, ಸಿಡಿಲು ಆರ್ಭಟಿಸುತ್ತಿದ್ದರೆ ಜನ ಭಯದಿಂದ ಮುದುಡಿ ಕೂರುವಂತೆ ಮಾಡಿತ್ತು.
ಇದರೊಂದಿಗೆ ರಭಸವಾಗಿ ಬೀಸಿದ ಗಾಳಿಯ ರಭಸಕ್ಕೆ ಕೆಲವರ ಮನೆಯ ಛಾವಣಿಯ ಶೀಟ್ಗಳು ಹಾರಿ ಹೋಗಿದ್ದರೆ, ಮರಗಳು ಅಲ್ಲಲ್ಲಿ ಬಿದ್ದು ಹಾನಿಯುಂಟಾಗಿದೆ. ಮಳೆ ಜೋರಾಗಿ ಸುರಿದಿದ್ದು, ಮಳೆ ನೀರು ಎಲ್ಲೆಡೆ ತುಂಬಿ ಹರಿದಿತ್ತು. ಉದಯ ರವಿ ರಸ್ತೆ , ಪಂಚಮಂತ್ರ ರಸ್ತೆ, ಮನಜಪಥ ರಸ್ತೆ ಮತ್ತು ಚಿನ್ಮಯಿ ಉದ್ಯಾನವನದ ಬಳಿ ಮರಗಳ ಕೊಂಬೆಗಳು ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿವೆ. ಇನ್ನು ನಗರದಾದ್ಯಂತ ಮರಗಳ ಕೊಂಬೆಗಳು ಅಲ್ಲಲ್ಲಿ ಮುರಿದಿವೆ. ಜತೆಗೆ ಗಾಳಿಯ ರಭಸಕ್ಕೆ ಮರದಲ್ಲಿದ್ದ ಎಲೆಗಳು, ಒಣಗಿದ ಕೊಂಬೆಗಳು ನೆಲಕ್ಕೆ ಬಿದ್ದು ಕಸದ ರಾಶಿ ಏರ್ಪಟ್ಟಿದೆ.
ಇನ್ನೊಂದೆಡೆ ಮಳೆಯ ನೀರಿನೊಂದಿಗೆ ಕಸಗಳು ಕೊಚ್ಚಿಕೊಂಡು ಬಂದಿದ್ದು ಅವು ರಸ್ತೆಯಲ್ಲಿ ಹರಡಿ ನಿಂತಿದ್ದು, ಪೌರಕಾರ್ಮಿಕರು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಮರದ ಕೊಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಅದನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ. ಕೆಲವೆಡೆ ಮರದ ಕೊಂಬೆ ಮುರಿದು ಬಿದ್ದ ಕಾರಣ ಮರದಡಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಆದರೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.