ಮೈಸೂರು: ಗ್ರಾಮೀಣ ಮಹಿಳೆಯರು ಯಾವುದೇ ಹಸ್ತಕ್ಷೇಪವಿಲ್ಲದೆ ಸರ್ಕಾರದ ಸೇವೆಗಳನ್ನು ಹಾಗೂ ಯೋಜನೆಗಳನ್ನು ಪಡೆಯಲು ಜಾಗೃತಿ ಮೂಡಿಸಿ, ತರಬೇತಿ ನೀಡಿ ಮಹಿಳೆಯರ ಸಾಮರ್ಥ್ಯ ಅಭಿವೃದ್ಧಿಪಡಿಸುವ ರೀತಿ ಮಹಿಳಾ ಶಕ್ತಿ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮಹಿಳಾ ಶಕ್ತಿ ಕೇಂದ್ರ, ಟ್ರಾನ್ಸ್ ಜೆಂಡರ್ ನೀತಿ ಹಾಗೂ ದಮನಿತ ಮಹಿಳೆಯರ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಕೋಶ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಠಿಕತೆಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಒಂದೇ ಕಡೆ ಎಲ್ಲಾ ಸೇವೆಗಳನ್ನು ನೀಡುವ ಉದ್ದೇಶದಿಂದ ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಇದು ಸಹಾಯವಾಗಲಿದೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅವರನ್ನು ಗುರ್ತಿಸಿ ಸರ್ಕಾರದ ಸೌಲಭ್ಯಗಳನ್ನು ನೀಡುವುದು, ವಸತಿ, ನಿವೇಶನಗಳನ್ನು ನೀಡುವುದು ಹಾಗೂ ಶಿಕ್ಷಣದಲ್ಲಿ ಆದ್ಯತೆ ನೀಡಿ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕು ಎಂದರು.
ಹುಣಸೂರು ತಾಲೂಕಿನಲ್ಲಿ ಇಬ್ಬರು ಲಿಂಗತ್ವ ಅಲ್ಪಸಂಖ್ಯಾರಿಗೆ ವಸತಿ ನಿರ್ಮಿಸಲಾಗಿದ್ದು, ಅದೇ ರೀತಿ ನಿವೇಶನ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಇತರೆ ತಾಲ್ಲೂಕುಗಳಲ್ಲೂ ಸಹ ವಸತಿ ನಿರ್ಮಿಸಿ ಕೊಡಬೇಕು ಎಂದರು.