ಮೈಸೂರು: ಮೈಸೂರಿನಲ್ಲಿ ಹಲಸು ಪ್ರಿಯರಿಗಾಗಿಯೇ ಎರಡು ದಿನಗಳ ಕಾಲ ನಡೆದ ಹಲಸಿನ ಹಬ್ಬ ನೆರೆದ ಜನರ ಮನಸೆಳೆಯುವುದರೊಂದಿಗೆ ಹೊಸ ನಮೂನೆಯ ರುಚಿಯಾದ ಹಣ್ಣುಗಳನ್ನು ಸವಿದವರು ಖುಷಿಪಟ್ಟರು.
ನಗರದ ನಂಜರಾಜ ಬಹುದ್ದೂರ್ ಛತ್ರ ಶನಿವಾರ ಮತ್ತು ಭಾನುವಾರ ನಡೆದ ಹಲಸು ಹಬ್ಬ ಹಲಸು ಪ್ರಿಯರ ಮನತಣಿಸುವಲ್ಲಿ ಯಶಸ್ಸಾಯಿತು. ಕೆಂಪು, ಹಳದಿ, ಬಿಳಿ, ಸಂಪಿಗೆ ಬಣ್ಣದ ಹಲಸಿನÀ ಹಣ್ಣಿನ ಘಮಲು ಛತ್ರದ ಸುತ್ತಮುತ್ತ ಹರಡಿ ದೂರದಿಂದಲೇ ಹಲಸಿನ ಹಬ್ಬ ನಡೆಯುತ್ತಿದ್ದ ಸ್ಥಳಕ್ಕೆ ಕರೆಯುವಂತೆ ಮಾಡಿತ್ತು.
ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ವತಿಯಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಹಲಸಿನ ಹಬ್ಬ ವಿಶಿಷ್ಟ ಅನುಭವ ನೀಡಿತು. ಇದುವರೆಗೆ ಮಾವಿನ ಮೇಳ ನೋಡಿದವರಿಗೆ ಹಲಸಿನ ಹಬ್ಬ ಹೊಸತನವನ್ನು ನೀಡಿತು. ಇತ್ತ ಹೆಜ್ಜೆ ಹಾಕಿದವರಿಗೆ ವಿಭಿನ್ನ ವಿಶಿಷ್ಟವಾಗಿ ಜೋಡಿಸಿಟ್ಟದ್ದ ವಿವಿಧ ಬಗೆಯ ಹಲಸಿನ ಹಣ್ಣುಗಳು ತಮ್ಮದೇ ಆದ ಸ್ವಾದದಿಂದ ರುಚಿ ನೋಡಿದವರ ಮನ ತಣಿಸಿದವು.
ಹಬ್ಬದಲ್ಲಿ ಹಲಸಿನಿಂದ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುವ 13ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಪಾಯಸ, ಪಲಾವ್ ಇದೇ ಮುಂತಾದ ಹಲಸಿನಿಂದ ತಯಾರಿಸಿದ್ದ ತಿನಿಸುಗಳನ್ನು ಗ್ರಾಹಕರು ಸವಿದರು. 26 ಬಗೆಯ ಹಲಸಿನ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಿಂಧೂ, ಹೆಜ್ಜೇನು, ಅಂಟುರಹಿತ, ಬೈರ, ವಿಯಟ್ನಾಂ ಸೂಪರ್ ಅರ್ಲಿ, ಬೆಂಗ್ ಸೂರ್ಯ, ನಾಗಚಂದ್ರ, ರಾಮಚಂದ್ರ, ಕಾಚಳ್ಳಿ ಹಸಲು, ಲಾಲ್‍ಬಾಗ್ ಮಧುರ, ಸಿಂಗಾಪುರ ಹಲಸು, ಜೇನು ಬೊಕ್ಕೆ, ಸರ್ವ ಋತು ಹಲಸು, ರುದ್ರಾಕ್ಷಿ ಬೊಕ್ಕೆ, ಈ-11, ಜೆ-33 ಮುಂತಾದ ತಳಿಯ ಹಲಸಿನ ಸಸಿಗಳನ್ನು ಮಾರಾಟ ಮಾಡಲಾಯಿತು. ಅಲ್ಲದೇ, ಹುಣಸೇ, ಸೀಬೆ, ನೇರಳೆ, ಮಾವಿನ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೃಷಿ ಮತ್ತು ಹಲಸು ಕೃಷಿ ಸಂಬಂಧಿತ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಒಟ್ಟಾರೆ ಎರಡು ದಿನಗಳ ಹಲಸಿನ ಹಬ್ಬ ಸಾಂಸ್ಕøತಿಕ ನಗರಿಯ ಜನರಿಗೆ ರಸದೌತಣ ನೀಡಿದ್ದಂತು ನಿಜ.