ಮೈಸೂರು: ದೇಶದ ಸ್ವಚ್ಛನಗರಿಗಳಲ್ಲಿ ಮೈಸೂರು ಸ್ಥಾನ ಪಡೆದಿದೆ. ಅಷ್ಟೇ ಸುಂದರವಾಗಿಯೂ ಇದೆ. ಆದರೆ ಮೈಸೂರಿನ ಹೊರವಲಯದ ತ್ಯಾಜ್ಯ ವಿಲೇವಾರಿಯ ತಾಣವಾಗಿತ್ತು. ಎಲ್ಲೆಂದರಲ್ಲಿ ಕಸವನ್ನು ಸುರಿಯುತ್ತಿದ್ದರಿಂದ ಅಶುಚಿತ್ವ ತಾಂಡವವಾಡುತ್ತಿತ್ತು. ಈ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿರುವ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿಯ ಸಿಎ ನಿವೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲು 7.60 ಕೋಟಿ ರೂ. ಪ್ರಸ್ತಾವ ಸಲ್ಲಿಸಿದ್ದು, ಮಂಗಳೂರು ಮಾದರಿಯನ್ನು ಜಾರಿಗೊಳಿಸುತ್ತಿದೆ.
ಇದರಿಂದ ಮೈಸೂರು ನಗರ ಸ್ವಚ್ಛ ನಗರಿಯಾದರೂ ನಗರದ ಹೊರವಲಯದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವುದಕ್ಕೆ ಬ್ರೇಕ್ ಬೀಳಲಿದ್ದು ತಾಲೂಕಿನ ಗ್ರಾಮ ಪಂಚಾಯಿತಿಗಳು ಮತ್ತು ನಗರ ಹೊರವಲಯದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾದಂತಿದೆ.
ಸ್ವಚ್ಛ ಭಾರತ್ ಯೋಜನೆಯಡಿ ತಾಲೂಕಿನಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಗ್ರಾ.ಪಂ ಮಟ್ಟದ¯್ಲÉ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ಅಲ್ಲದೆ, ಸಿಎ ನಿವೇಶನ ದುರ್ಬಳಕೆಯಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಪೈಕಿ 21 ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲು ಗ್ರಾಮೀಣಾಭಿವೃದ್ಧಿ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಸ್ವಚ್ಛ ನಗರಿ ಮೈಸೂರಿಗೆ ಹೊಂದಿಕೊಂಡಿರುವ 17 ಪಂಚಾಯಿತಿ ಹಾಗೂ ಉಳಿದ ಗ್ರಾಪಂಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ಸಿಎ ನಿವೇಶವನ್ನೇ ಘನ ತ್ಯಾಜ್ಯ ನಿರ್ವಹಣಾ ಘಟಕವಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.
ಪಂಚಾಯಿತಿ ವ್ಯಾಪ್ತಿಯ ಸಿಎ ನಿವೇಶನದ 80*80 ವ್ಯಾಪ್ತಿಯ ಜಾಗದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲಾಗುತ್ತದೆ. 20 ಲಕ್ಷ ರೂ ವೆಚ್ಚದಲ್ಲಿ ಒಂದು ಘಟಕ ನಿರ್ಮಿಸಲು ಉz್ದÉೀಶಿಸಲಾಗಿದೆ. ಈ ಘಟಕದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಲೋಹ, ಬಟ್ಟೆ, ಬಾಟಲಿ, ಪ್ಲಾಸ್ಟಿಕ್ ಮತ್ತು ಪೇಪರ್ ಇತ್ಯಾದಿಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ 25ಕ್ಕೂ ಹೆಚ್ಚು ವೆಂಡರ್‍ಗಳನ್ನು ಗುರುತಿಸಲಾಗಿದೆ. ಈಗಾಗಲೇ 21 ಪಂಚಾಯಿತಿ ಸಿಎ ನಿವೇಶನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲು ಸರಕಾರ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ತಿಂಗಳು ಉಳಿದ ಗ್ರಾಪಂಗಳಲ್ಲಿ ಸಿಎ ನಿವೇಶನದಲ್ಲಿ ಘಟಕ ಸ್ಥಾಪಿಸಲು ಪ್ರಸ್ತಾವ ಸಿದ್ಧಗೊಳಿಸಲಾಗುತ್ತಿದ್ದು, ಮುಂದಿನ ತಿಂಗಳು ಕಳುಹಿಸಲಾಗುತ್ತಿದೆ. ಈ ವರ್ಷದೊಳಗೆ ಮೈಸೂರು ತಾಲೂಕಿನ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಾ.ಪಂ ಇಒ ಕೃಷ್ಣಕುಮಾರ್ ತಿಳಿಸಿದ್ದಾರೆ.
ಪಂಚಾಯಿತಿ ಸಂಪನ್ಮೂಲ ಬಳಸಿಕೊಂಡು ಪ್ರತಿ ಮನೆಯಿಂದಲೂ ಸಂಗ್ರಹಿಸಿದ ತ್ಯಾಜ್ಯವನ್ನು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಗಡಿಸಲಾಗುತ್ತದೆ. ಅಲ್ಲದೆ ಪ್ರತಿ ವಾರಕ್ಕೊಮ್ಮೆ ಮನೆ ಮನೆಗೆ ಭೇಟಿ ನೀಡಿ ಹಸಿ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಮಾಡುವಂತೆ ಅರಿವು ಮೂಡಿಸಿ, ಮನೆಯಿಂದಲೇ ತಾಜ್ಯ ವಿಂಗಡಿಸಿ ಸಂಗ್ರಹಿಸಲಾಗುತ್ತದೆ. ಹಸಿ ತ್ಯಾಜ್ಯವನ್ನು ಪಾಲಿಕೆಯ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲಾಗುತ್ತದೆ. ಒಣ ಕಸವನ್ನು ಗ್ರಾಪಂನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ನಿರ್ವಹಣ ಘಟಕದಲ್ಲಿ ಲೋಹ, ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ಎಲ್ಲಾ ತರಹದ ಕಸವನ್ನು ವಿಂಗಡಿಸಿ ಮಾರಾಟ ಮಾಡಲಾಗುತ್ತದೆ.