ಮೈಸೂರು: ಸಾಂಸ್ಕೃತಿಕ ಮತ್ತು ಅರಮನೆಗಳ ನಗರಿ ಮೈಸೂರಿನ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲ್ಲಿ ಇದೀಗ ವಿಶೇಷ ಕೈಮಗ್ಗ ಮೇಳ ಸಂಸ್ಕೃತಿಯನ್ನು ನ.22ರಿಂದ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಗಮನಸೆಳೆಯಲಿದೆ.
ಜವಳಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ನವದೆಹಲಿ ಮತ್ತು ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ಮೇಳ ಆಸಕ್ತರನ್ನು ಸೆಳೆಯುತ್ತಿದೆ.
ಈ ಮೇಳವನ್ನು ನೇಕಾರರು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳು ಹೆಚ್ಚು ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಹಾಗೂ ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ವೃತ್ತಿಯನ್ನು ಅವಲಂಭಿಸಿ ಜೀವನ ನಿರ್ವಹಣೆ ಮಾಡುತ್ತಿರುವ ನೇಕಾರರ ಕುಟುಂಬಗಳನ್ನು ಉತ್ತೇಜಿಸಿ ಒಂದೇ ಸೂರಿನಡಿ ಮಾರುಕಟ್ಟೆಯನ್ನು ಕಲ್ಪಿಸಿ ಜನತೆಗೆ ಕೈಮಗ್ಗ ಉತ್ಪನ್ನಗಳ ಅರಿವು ಮೂಡಿಸಿ ಉತ್ಪನ್ನಗಳನ್ನು ಬಳಸಲು ಅನುವು ಮಾಡಿಕೊಡಲಾಗುತ್ತಿದೆ.
ವಿಶೇಷ ಕೈಮಗ್ಗ ಮೇಳದಲ್ಲಿ ಉತ್ತರ ಭಾರತದ ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಗುಲ್ಬರ್ಗ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರ ಸಹಕಾರಿ ಸಂಘಗಳಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುತ್ತಿದೆ.
ಇದರೊಂದಿಗೆ ರೇಷ್ಮೇ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಜೀವರಮ್ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡಿರಿ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒರ್ರಿಸ್ಸಾ ರಾಜ್ಯದ ಸಂಬಲ್‍ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರ ರಾಜ್ಯದ ಪಶ್ಮಿನಾ ಶಾಲ್, ಆಂಧ್ರ್ರಪ್ರದೇಶದ ಗೊದ್‍ವಾಲ್ ರೇಷ್ಮೇ ಸೀರೆ, ಕಲ್ಮಕಾರಿ ಸೀರೆ, ಮಧುರೈ ಟೈ ಅಂಡ್ ಡೈ, ಗುಜರಾತ್ ರಾಜ್ಯದ ಪಟೋಲ ರೇಷ್ಮೆ ಸೀರೆಗಳು ಇತರೆ ಎಲ್ಲ ರಾಜ್ಯದ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್‍ಗಳು, ಕಸೂತಿ ವಸ್ತ್ರಗಳು, ಟವಲ್‍ಗಳು, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಇಲ್ಲಿ ಪ್ರದರ್ಶನ ಕಾಣಲಿವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ವಿಶೇಷ ಕೈಮಗ್ಗ ಮೇಳ ಸಂಸ್ಕøತಿ ಅನಾವರಣದೊಂದಿಗೆ ಮಹಿಳೆಯರಿಗೆ ಮನವೊಪ್ಪುವ ಕೈಮಗ್ಗಗಳ ಸೀರೆಗಳು ಇಲ್ಲಿ ಅನಾವರಣಗೊಳ್ಳಲಿರುವುದಂತು ನಿಜ.