ಮೈಸೂರು: ಮರಾಠಾ ಅಭಿವೃದ್ಧಿ ನಿಗಮದ ಸ್ಥಾಪನೆ ವಿರುದ್ಧ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಬಂದ್ ಗೆ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿದೆ. ಸಾಂಸ್ಕೃತಿಕ ನಗರಿಯಲ್ಲ ಇಂದು ಯಾವುದೇ ಬಂದ್ ನಡೆಯಲಿಲ್ಲ. ಎಲ್ಲ ವಾಹನ ಸಂಚಾರ, ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಓಡಾಟ ಎಂದಿನಂತಿದೆ. ಅಲ್ಲ ಅಂಗಡಿ ಮುಂಗಟ್ಟುಗಳು , ಶಾಪಿಂಗ್ ಕಾಂಪ್ಲೆಕ್ಸ್ ಗಳು ತೆರೆದಿವೆ.
ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಬಂದ್ ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ ಅತಿ ಅಗತ್ಯ ಸೇವೆಯ ಉದ್ಯಮವಾಗಿರುವುದರಿಂದ ಎಂದಿನಂತೆ ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು ತೆರೆದಿರುತ್ತವೆ. ನಮ್ಮದು ಬೆಂಬಲ ಮಾತ್ರ ಆದರೆ ನಾವು ಉದ್ಯಮವನ್ನು ಸ್ಥಗಿತಗೊಳಿಸಲ್ಲ ಎಂದರು.
ಮೈಸೂರು ರೀಜನ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಪೆಟ್ರೋಲ್ ಬಂಕ್ ತೆರೆದಿರಲಿದೆ ಎಂದು ತಿಳಿಸಿದೆ. ಈಗಾಗಲೇ ಮೈಸೂರು ಉದ್ಯಮ ಸಂಘಗಳ ಒಕ್ಕೂಟ, ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀಕರ ಸಂಘ, ದೇವರಾಜ ಅರಸ್ ರಸ್ತೆ ಟ್ರೇಡ್ ಅಸೋಸಿಯೇಷನ್, ಕಲ್ಯಾಣಮಂಟಪ ಮಾಲೀಕರ ಸಂಘ ಸೇರಿದಂತೆ 15 ಸಂಘಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಆಟೋ ಚಾಲಕರ ಟ್ರೇಡ್ ಯೂನಿಯನ್ ಗೆ ಸೇರಿದ ಚಾಲಕರು ಮಾತ್ರ ಬಂದ್ ಗೆ ಬೆಂಬಲ ನೀಡಿದ್ದಾರೆ.
ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ಮಾತನಾಡಿ ಈಗಾಗಲೇ ಬಂದ್ ಕರೆ ನೀಡಿರುವ ಸಂಘಟನೆಗಳವರಿಗೆ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಬಲವಂತವಾಗಿ ಅಂಗಟಿಗಳನ್ನು ಮುಚ್ಚಿಸಬಾರದು. ಬ ಸ್ಗಳತ್ತ ಕಲ್ಲು ತೂರಬಾರದು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದ್ದು, ಅಹಿತಕರ ಘಟನೆಗಳನ್ನು ನಡೆಸಿದಲ್ಲಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು. ಅಗ್ರಹಾರವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ನಡೆಸಲು ಮುಖಂಡರು ಅನುಮತಿ ಕೇಳಿದ್ದರು. ಆದರೆ ಅನುಮತಿ ನೀಡಿಲ್ಲ, ಕೆಲವೇ ಕೆಲವು ನಿಮಿಷಗಳು ಮಾತ್ರ ವಿವಿಧೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದರು.
ನಗರ ಬಸ್ ನಿಲ್ಲಾಣದಲ್ಲಿ ಎಂದಿನಂತೆ ಬಸ್ ಗಳು ಸಂಚರಿಸುತ್ತಿವೆ. ಪ್ರತಿನಿತ್ಯದಂತೆ ಬಸ್ ನಿಲ್ದಾಣ ಕಡೆ ಜನರು ಬರುತ್ತಿದ್ದಾರೆ. ನಗರ ಬಸ್ ನಿಲ್ದಾಣ ಒಳಭಾಗದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟು ತೆರೆದಿವೆ.
ಅದೇ ವೇಳೆ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಕನ್ನಡ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಇದರ ಪರಿಣಾಮ ವಾಹನಗಳು ಓಡಾಡಲು ಕಷ್ಟವಿದೆ. ಕಕ್ಷಿದಾರರು ಕೋರ್ಟಿಗೆ ಹಾಜರಾಗಲು ತೊಂದರೆ ಆಗಲಿದೆ. ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು ನಮ್ಮ ಬೆಂಬಲ ಸೂಚಿಸಿ ಶನಿವಾರ ಸಂಘದ ಸದಸ್ಯರ ಕೋರಿಕೆಯಂತೆ ಕೋರ್ಟಿನಿಂದ ಹೊರಗುಳಿದು ಬೆಂಬಲ ಸೂಚಿಸಲು ಕಾರ್ಯಕಾರಿ ಮಂಡಳಿಯು ತೀರ್ಮಾನಿಸಲಾಗಿದೆ. ಅದರಿಂದ ಇಂದು ಕಲಾಪವಿಲ್ಲ ಎಂದರು.