ಮೈಸೂರು: ತಲಕಾಡು ಪಂಚಲಿಂಗ ದರ್ಶನಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಡಿ.10ರಿಂದ 19ರವರೆಗೆ ನಡೆಯಲಿರುವ ಪಂಚಲಿಂಗ ದರ್ಶನಕ್ಕೆ ಬೇಕಾಗುವಷ್ಟು ಅನುದಾನವನ್ನು ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಲಿಂಗ ದರ್ಶನಕ್ಕೆ ದಸರಾದಲ್ಲಿ ಉಳಿದಿರುವ 7.8 ಕೋಟಿ ರೂ. ಅನುದಾನದಲ್ಲಿ ಪಂಚಲಿಂಗ ದರ್ಶನಕ್ಕೆ ಬೇಕಾಗುವಷ್ಟು ಅನುದಾನ ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಉಳಿದಂತೆ ಡಿ.10ರಿಂದ 19ರವರೆಗೆ ನಡೆಯಲಿರುವ ಪಂಚಲಿಂಗ ದರ್ಶನಕ್ಕೆ ಎಲ್ಲಾ ಸಿದ್ಧತೆ ಆಗುತ್ತಿದೆ. ಡಿ.14ರಂದು ವಿಶೇಷ ಕಾರ್ಯಕ್ರಮ ಇರಲಿದ್ದು, ಡಿ.13ರಂದು ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಸ್ತವ್ಯ ಮಾಡಿ, ಡಿ.14ರ ಮುಂಜಾನೆ ಪಂಚಲಿಂಗ ದರ್ಶನದ ವಿಶೇಷ ಪೂಜೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಸ್ಥಳೀಯರಿಗೆ ಅವಕಾಶ: ಕೋವಿಡ್ ಹಿನ್ನೆಲೆಯಲ್ಲಿ ಸಲಹೆ ನೀಡುವಂತೆ ಪರಿಣಿತರ ಸಮಿತಿಗೆ ಕೇಳಿದ್ದು, ವರದಿ ಸಹ ಕೊಟ್ಟಿದ್ದಾರೆ. ಪ್ರತಿ ದಿನ 1000 ಜನರಿಗೆ ಹಾಗೂ ಡಿ.14 ರಂದು 1500 ಜನರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಲಕಾಡಿನ ಜನರು ಹಾಗೂ ಆ ತಾಲ್ಲೂಕಿನ ಜನರಿಗೆ ಮಾತ್ರ ಅವಕಾಶ ನೀಡಿ, ಹೊರಗಿನವರಿಗೆ ಅವಕಾಶ ನೀಡದಂತೆ ಪರಿಣಿತರ ಸಮಿತಿ ಸಲಹೆ ಮಾಡಿದೆ ಎಂದರು.