ಮೈಸೂರು: ಸಾರಿಗೆ ನೌಕರರ ಪ್ರತಿಭಟನೆ ನಡುವೆ ನಗರದಲ್ಲಿ ಒಂದೊಂದು ಬಸ್ ಗಳು ಸಂಚರಿಸುತ್ತಿವೆ. ಬೆಳಿಗ್ಗೆ ನಗರ ಸಾರಿಗೆ ಬಸ್ ಗಳು ರಸ್ತೆಗಿಳಿದಿದ್ದರೂ ಮುಷ್ಕರನಿರತ ನೌಕರರ ಬೆದರಿಕೆಯಿಂದಾಗಿ ನಿಧಾನವಾಗಿ ಬಸ್ ಸಂಚಾರದಲ್ಲಿ ಇಳಿಮುಖ ಕಂಡು ಬರುತ್ತಿದೆ. ಬಸ್ ನಿಲ್ದಾಣಕ್ಕೆ ಬಂದಿರುವ ಬಸ್ ಗಳನ್ನು ಅಧಿಕಾರಿಗಳು ಕಳುಹಿಸಿಕೊಡುತ್ತಿದ್ದಾರೆ. ಅಲ್ಲಲ್ಲೇ ಡಿಪೋಗಳಲ್ಲಿ ನೌಕರರು ಬಸ್ ನಿಲ್ಲಿಸುತ್ತಿದ್ದಾರೆ. ಚಾಲಕರು, ನಿರ್ವಾಹಕರನ್ನು ಅಧಿಕಾರಿಗಳು ಕರೆ ಮಾಡಿ ಕರೆಸಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಬಸ್ ಸಂಚಾರ ಇಳಿಮುಖವಾಗಿದ್ದು, ಪ್ರತಿನಿತ್ಯ ಮೈಸೂರು ಬಸ್ ನಿಲ್ದಾಣದಿಂದ 520ಕ್ಕೂ ಹೆಚ್ಚು ರೂಟ್ ಆಪರೇಟಿಂಗ್ ನಡೆಯುತ್ತಿತ್ತು. ಆದರೆ ಇವತ್ತು ರೂಟ್ ಅಪರೇಟಿಂಗ್ ಸಂಪೂರ್ಣ ಇಳಿಮುಖವಾಗಿದೆ.
ಮೈಸೂರಿನಲ್ಲಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬಸ್ ಕೊರತೆ ಉಂಟಾಗಿದ್ದು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣ ಜಾಗ ಖಾಲಿಯಾಗಿದ್ದು, ಬೆಂಗಳೂರು ವಿಭಾಗ ಬಣಗುಡುತ್ತಿದೆ. ಬರುವ ಒಂದೊಂದೇ ಬಸ್ ಗೆ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಮೈಸೂರಿನಲ್ಲಿಯೂ ಬಂದ್ ಕಾವು ಪಡೆದುಕೊಳ್ಳುತ್ತಿದೆ. ಮೈಸೂರಿನಲ್ಲಿಯೂ ಸಾರಿಗೆ ನೌಕರರ ಪ್ರತಿಭಟನೆ ಬಿಸಿ ತಟ್ಟುತ್ತಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಸಂಪೂರ್ಣ ಬಸ್ ಸಂಚಾರ ಬಂದ್ ಆಗಿದೆ. ಗ್ರಾಮಾಂತರ ಭಾಗಕ್ಕೆ ಬಂದ್ ಬಿಸಿ ತಟ್ಟಿದೆ. ಹಂತ ಹಂತವಾಗಿ ಸಾರಿಗೆ ಸಿಬ್ಬಂದಿಗಳು ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದಾರೆ. ಅಧಿಕಾರಿಗಳ ಮನವಿಗೂ ಕೇರ್ ಮಾಡದೆ ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದಾರೆ. ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದು, ಬಸ್ ಗಳಿಗೆ ಕಾದು ಕಾದು ಸುಸ್ತಾಗಿದ್ದಾರೆ. ಬೆಂಗಳೂರು ಫ್ಲ್ಯಾಟ್ ಫಾರಂ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಬಸ್ ಗಾಗಿ ಕಾದು ಬಸ್ ಗಳಿಲ್ಲದೆ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆ ಬೆಂಗಳೂರು ಮೈಸೂರು ನಡುವಿನ ಪ್ರಯಾಣಕ್ಕೆ ಟ್ಯಾಕ್ಸಿ ಚಾಲಕರು 300-350 ರೂಪಾಯಿ ದರ ನಿಗದಿಪಡಿಸಿ ಜನರನ್ನು ಕರೆದೊಯ್ಯುತಿದ್ದಾರೆ.
ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಒಂದು ಬಸ್ ಬಂದರೂ ಪ್ರಯಾಣಿಕರು ಮುಗಿಬೀಳುತ್ತಿದ್ದು, ಬಸ್ ಹತ್ತಲು ಪ್ರಯಾಣಿಕರ ನೂಕುನುಗ್ಗಲು ನಡೆಸಿದ್ದಾರೆ. ಒಂದು ಗಂಟೆಯ ಬಳಿಕ ಬಂದ ಬಸ್ ಹತ್ತಲು ಪ್ರಯಾಣಿಕರು ಮುಗಿಬಿದ್ದಿದ್ದಾರೆ. ಬಸ್ ಹತ್ತುವ ವೇಳೆ ಸಾಮಾಜಿಕ ಅಂತರ ಮಾಯವಾಗಿದ್ದು, ಕೊರೋನಾ ಮರೆತು ಬಸ್ ಹತ್ತಲು ಮುಗಿಬಿದ್ದಿದ್ದಾರೆ.