ಮೈಸೂರು: ಕೇಂದ್ರ ಸರ್ಕಾರದ ಜನೌಷಧಿ ಸೇರಿದಂತೆ ಎಪಿಎಂಸಿ ಕಾಯ್ದೆಯಿಂದ ಜನತೆಗಾಗುವ ಉಪಯೋಗಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಜನವರಿ 5ರಿಂದ ರಾಜ್ಯಾದ ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯನ್ನು ಗ್ರಾಮೀಣ ಪ್ರದೇಶಗಳ ಜನರಿಗೂ ತಲುಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಇದನ್ನು ಸಹಕಾರ ಇಲಾಖೆಯ ಅಧೀನದಲ್ಲಿ ಬರುವ ಮಾರ್ಕೆಂಟಿಂಗ್ ಫೆಡರೇಶನ್ ಮೂಲಕ ಕೇಂದ್ರಗಳನ್ನು ತೆರೆದು ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರು ತಮಗೆ ಬಂದ ಪತ್ರದ ಬಗ್ಗೆ ಉಲ್ಲೇಖಿಸಿದ್ದು, “ವ್ಯಕ್ತಿಯೊಬ್ಬರು ತಮ್ಮ ತಂದೆಗೆ ಬಿಪಿ, ಶುಗರ್ ಗಾಗಿ ತಿಂಗಳಿಗೆ 2ರಿಂದ 3 ಸಾವಿರ ರೂಪಾಯಿ ವ್ಯಯಿಸಬೇಕಾಗಿತ್ತು. ಆದರೆ, ಜನೌಷಧಿ ಬಂದ ಮೇಲೆ ಕೇವಲ 250 ರೂಪಾಯಿಗೆ ಎಲ್ಲವೂ ಸಿಗುತ್ತಿದೆ” ಎಂದು ಪತ್ರದಲ್ಲಿ ಬರೆದಿದ್ದಾದ್ದಾಗಿ ಡಿವಿಎಸ್ ಅವರು ಮಾಹಿತಿ ನೀಡಿದ್ದರು ಎಂದು ಸಚಿವರಾದ ಸೋಮಶೇಖರ್ ಅವರು ಉಲ್ಲೇಖಿಸಿದರು.
ಇನ್ನು ಆತ್ಮನಿರ್ಭರ ಯೋಜನೆಯಡಿ ಕರ್ನಾಟಕಕ್ಕೆ 4750 ಕೋಟಿ ಅನುದಾನ ಸಿಗುತ್ತಿದೆ. ಇದರಲ್ಲಿ ಶೂನ್ಯ ಬಡ್ಡಿದರ ಹಾಗೂ ಶೇ. 3 ರ ಬಡ್ಡಿದರದಲ್ಲಿ 2ರಿಂದ 3 ಲಕ್ಷ ರೂಪಾಯಿವರೆಗೆ ಮೀನುಗಾರಿಕೆ ಹಾಗೂ ಹೈನುಗಾರಿಕೆಗೆ ಸಾಲವನ್ನು ಕೊಡಲಾಗುತ್ತಿದೆ. ಜೊತೆಗೆ ಅರ್ಥಿಕವಾಗಿ ಬಲ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಜನರಿಗೆ ಆರ್ಥಿಕ ಬಲವನ್ನು ತುಂಬುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತದ ಅಡಿ ಈಗಾಗಲೇ 600 ಕೋಟಿ ರೂಪಾಯಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಈ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಸಚಿವರು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಇದು ಬಂದಿದ್ದರಿಂದ ರೈತ ತನ್ನ ಉತ್ಪಾದನೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು. ನನ್ನ ಬೆಳೆ, ನನ್ನ ಬೆಲೆ ಎಂದು ರೈತನೇ ನಿರ್ಧರಿಸುತ್ತಾನೆ. ಅಷ್ಟು ಸ್ವಾತ್ರಂತ್ರ್ಯವನ್ನು ರೈತರಿಗೆ ಸಿಗುವಂತೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಂದು ಸಚಿವರು ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಬಾರಿ ರೈತರ ನೆರವಿಗೆ ಬಂದಿದ್ದೇವೆ. ಇನ್ನು ಎಪಿಎಂಸಿಯನ್ನು ಮುಚ್ಚುವ ಪ್ರಸ್ತಾವೂ ನಮ್ಮ ಸರ್ಕಾರದ ಮುಂದೆ ಇಲ್ಲ. ರೈತರ ಪರವಾಗಿ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿದೆ. ಇದು ವಿರೋಧ ಪಕ್ಷಗಳ ಸುಳ್ಳು ಪ್ರಚಾರ. ಅವರ ರಾಜಕೀಯ ದುರುದ್ದೇಶಕ್ಕೋಸ್ಕರ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ರಾಷ್ಟ್ರಿಯ ಹಿಂದುಳಿದ ವರ್ಗಗಳ ಬಿಜೆಪಿ ಘಟಕದ ಅಧ್ಯಕ್ಷರಾದ ಲಕ್ಷ್ಮಣ್ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯ ಉಪಯೋಗಗಳ ಬಗ್ಗೆ ಸಹಕಾರ ಸಚಿವರಾದ ಸೋಮಶೇಖರ್ ಅವರು ವಿಸ್ತಾರವಾಗಿ ಹಾಗೂ ಸರಳವಾಗಿ ತಿಳಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ. ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು, ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಇನ್ನೂ ಅನೇಕ ಉಪಯೋಗಗಳು ಇದರಲ್ಲಿವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿಯ ಗ್ರಾಮ ಸ್ವರಾಜ್ಯ ಕಾರ್ಯಕ್ರಮವು ರಾಜ್ಯಾದ್ಯಂತ ಯಶಸ್ವಿಯಾಗಿದ್ದು, ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರ್ವ ವ್ಯಾಪಿ ಪಕ್ಷವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಎಲ್ಲರಲ್ಲೂ ನಾಯಕತ್ವ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಮೋರ್ಚಾಗಳನ್ನು ಮಾಡಿ ಪ್ರತಿ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಿ, ಬೆಳೆಸಿದೆ. ಕಾಂಗ್ರೆಸ್ ನಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಆ ಪಕ್ಷದಡಿ ಲೈಟ್ ಕಂಬವನ್ನು ನಿಲ್ಲಿಸಿದರೂ ಗೆಲ್ಲುತ್ತಿತ್ತು ಎಂಬ ಮಾತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸಹಿತ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಎಂದು ತಿಳಿಸಿದರು.
ನಮ್ಮದು ಕೃಷಿ ಪದ್ಧತಿಯ ದೇಶ. ಈ ಹಿಂದೆ ರೈತನ ಬೆಳೆಗೆ ಬೆಲೆ ಸಿಗುತ್ತಿರಲಿಲ್ಲ. ಆದರೆ, ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ನ್ಯಾಯ ಸಿಕ್ಕಿದೆ. ಆತ ತನ್ನ ಉತ್ಪನ್ನಕ್ಕೆ ಈಗ ತಾನೇ ಬೆಲೆ ನಿರ್ಧರಿಸುವ ಕಾಲ ಬಂದಿದೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಮುಕ್ತವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ತಿಳಿಸಿದರು.
ಬಿಜೆಪಿಯ ನಿಷ್ಠೆ ಯಿಂದ ದುಡಿದರೆ ಕಟ್ಟಕಡೆಯ ಕಾರ್ಯಕರ್ತ ಸಹ ಉನ್ನತ ಹುದ್ದೆಗೇರುತ್ತಾರೆ ಎಂಬುದಕ್ಕೆ ಬಿಜೆಪಿ ಶಾಸ್ತಿ. ಇಲ್ಲಿ ಹಿಂದುಳಿದ ವರ್ಗದವರಿಗೂ ಉತ್ತಮ ಸ್ಥಾನ ಸಿಗುತ್ತದೆ ಎಂಬುದಕ್ಕೆ ಸಂಸದ ಸ್ಥಾನಕ್ಕೆ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ ಎಂದು ಕಟೀಲ್ ಅವರು ತಿಳಿಸಿದರು.