ಮೈಸೂರು: ಎರಡು ಹಂತದಲ್ಲಿ ನಡೆಯುತ್ತಿರುವ ಹಳ್ಳಿಸಮರ ತಾರಕಕ್ಕೇರಿದೆ. ಗೆಲುವನ್ನು ಬಯಸಿ ಸ್ಪರ್ಧೆಗಿಳಿದಿರುವ ಅಭ್ಯರ್ಥಿಗಳು ಗೆಲುವಿಗಾಗಿ ಹಲವು ಕಸರತ್ತು, ತಂತ್ರ ನಡೆಸುತ್ತಿದ್ದಾರೆ. ಜತೆಗೆ ಭರವಸೆಗಳಿಗೇನು ಕೊರತೆಯಲ್ಲ.
ಚುನಾವಣೆ ಸಂದರ್ಭ ನೀಡಿದ ಭರವಸೆಗಳೆಲ್ಲವೂ ಈಡೇರುವಂತಿದ್ದರೆ ಇಷ್ಟರಲ್ಲೇ ಗ್ರಾಮೀಣ ಪ್ರದೇಶಗಳೆಲ್ಲ ಅಭಿವೃದ್ಧಿ ಹೊಂದಿ ಇವತ್ತು ಅಭಿವೃದ್ಧಿಯ ಬಗ್ಗೆ ಭರವಸೆ ನೀಡಬೇಕಾದ ಪ್ರಮೇಯವೇ ಬರುತ್ತಿರಲಿಲ್ಲವೇನೋ? ಆದರೆ ಈ ಗಿಮಿಕ್ ಗಳೆಲ್ಲವೂ ಕೇವಲ ಚುನಾವಣೆ ವೇಳೆ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇನ್ನು ಚುನಾವಣೆ ವೇಳೆ ಅಭ್ಯರ್ಥಿಗಳು ಮುದ್ರಿಸಿ ಹಂಚುವ ಕರಪತ್ರಗಳು ಕೂಡ ಹಲವು ಭರವಸೆಗಳನ್ನೊಳಗೊಂಡಿರುತ್ತವೆ. ಅವುಗಳನ್ನು ಓದಿ ಮತದಾರರು ಮತ ಹಾಕುತ್ತಾರೋ ಬಿಡುತ್ತಾರೋ ಅದು ಆಚೆಗಿರಲಿ. ಆದರೆ ಮತದಾರರನ್ನು ಸೆಳೆಯಲು ಏನು ಬೇಕೋ ಅದನ್ನಂತು ಪ್ರತಿಯೊಬ್ಬರೂ ಮಾಡುತ್ತಿದ್ದಾರೆ. ಈ ನಡುವೆ ಗ್ರಾಮಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಲು ಮುದ್ರಿಸಿರುವ ಕರಪತ್ರವೊಂದು ಎಲ್ಲರ ಗಮನಸೆಳೆಯುತ್ತಿದ್ದು, ಅದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಈ ಕರಪತ್ರದ ವಿಶೇಷ ಏನೆಂದರೆ ಸಾಮಾನ್ಯವಾಗಿ ಅಭ್ಯರ್ಥಿಗಳು ಗೆದ್ದರೆ ಏನು ಸಾಮಾಜಿಕ ಸೇವೆ ಮಾಡುತ್ತೇವೆ ಎಂಬುದನ್ನು ಮಾತ್ರ ಮುದ್ರಿಸುತ್ತಾರೆ ಆದರೆ ಈ ಅಭ್ಯರ್ಥಿ ಮಾತ್ರ ಭಿನ್ನ. ಇವರು ಗೆದ್ದರೆ ಮಾತ್ರವಲ್ಲ, ಸೋತರೂ ಏನು ಮಾಡುತ್ತೇನೆ ಎಂಬುದನ್ನು ಕೂಡ ಮುದ್ರಿಸಿದ್ದು ಅದು ಈಗ ಎಲ್ಲರ ಗಮನಸೆಳೆಯುತ್ತಿದೆ. ಹಾಗಾದರೆ ಆ ಕರಪತ್ರದಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ.
ತುಮಕೂರು ನಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಲ್ಕೆರೆ ಗ್ರಾಮದ ಅಭ್ಯರ್ಥಿ ಗಂಗಮ್ಮ.ಹೆಚ್ ಎನ್ನುವವರು ಭರವಸೆಗಳೊಂದಿಗೆ ಧಮ್ಕಿಯನ್ನೂ ಹಾಕಿರುವುದು ಚುನಾವಣೆಗೆ ಸ್ಪರ್ಧಿಸಿರುವ ಗಂಗಮ್ಮ ಪಾದರಕ್ಷೆ ಗುರುತಿಗೆ ಮತ ನೀಡಿ ಗೆಲ್ಲಿಸಿದರೆ ಏನು ಮಾಡುತ್ತೇನೆ, ಸೋತರೆ ಏನು ಮಾಡುತ್ತೇನೆ ಎಂದು ಕರಪತ್ರದಲ್ಲಿ ಮುದ್ರಿಸಿ ಪ್ರಚಾರ ಮಾಡುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೆದ್ದರೆ ಮಾಡುವ ಕೆಲಗಳೇನು ಎಂಬುದರ ಬಗ್ಗೆ ಗಂಗಮ್ಮ ಏನು ಹೇಳಿದ್ದಾರೆ ನೋಡೋಣ.. ಚುನಾವಣೆಯಲ್ಲಿ ಗೆದ್ದರೆ ಕರೇ ತಿಮ್ಮರಾಯಸ್ವಾಮಿ ದೇವಸ್ಥಾನದ ದೇವಾಲಯದ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಖಾತೆ ಮಾಡಿಸುತ್ತೇನೆ, ಅರಳೀಕಟ್ಟೆ ಕಟ್ಟಿಸುತ್ತೇನೆ, ಊರಾಚೆಯ ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಕಲ್ವರೆಗೆ ನಕಾಶೆಯಂತೆ ರಸ್ತೆ ಮಾಡಿಸುತ್ತೇನೆ, ಊರ ಮುಂದೆ ಮಳೆಯ ನೀರು ರಸ್ತೆಗೆ ಹರಿದು ತೊಂದರೆಯಾಗದಂತೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಭಯ್ಯನ ಗದ್ದೆವೆರೆಗೆ ಸಿಸಿ ಚರಂಡಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸೋತರೆ ಮಾಡುವ ಕೆಲಸಗಳೇನು ಗೊತ್ತಾ? ಗೆದ್ದರೆ ಮಾಡುವ ಕೆಲಸಗಳನ್ನು ಪಟ್ಟಿ ಮಾಡಿ ಮತದಾರರಿಗೆ ತಿಳಿಸಿರುವ ಗಂಗಮ್ಮ ಸೋತರೆ ಏನು ಮಾಡುತ್ತೇನೆ ಎಂಬುದನ್ನೂ ತಿಳಿಸಿ ಬೆದರಿಕೆ ಹಾಕಿದ್ದಾರೆ. ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುತ್ತೇನೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆದಿರುವ 40 ಕುಟುಂಬಗಳ ಮೈತ್ರಿ, ಮನಸ್ವಿನಿ, ವಿಧವಾ ವೇತನ ಯೋಜನೆಯ ಹಣವನ್ನು ನಿಲ್ಲಿಸುತ್ತೇನೆ, ಸರ್ವೆ ನಂ.86ರಲ್ಲಿ ಹಳೆ ದಾಖಲೆಯಂತೆ ಸ್ಮಶಾನ ಮಾಡಿಸುತ್ತೇನೆ, ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್ಲಿಸ್ಟ್ನಲ್ಲಿ ತೆರವುಗೊಳಿಸಲು ಹೋರಾಟ ಮಾಡುತ್ತೇನೆ. ಹೇಳಿದ್ದನ್ನು ಮಾಡುತ್ತೇನೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಅಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿದ್ದ 6 ಮನೆಗಳ ಬಿಲ್ ನಿಲ್ಲಿಸಿರುವುದೇ ಸಾಕ್ಷಿ ಎಂದು ಧಮ್ಕಿ ಹಾಕಿದ್ದಾರೆ.
ಚುನಾವಣೆಗಳಲ್ಲಿ ಆಸೆ ಆಮಿಷಗಳನ್ನು ಒಡ್ಡುವುದು ಸಹಜ. ಆದರೆ ಮತ ಹಾಕಿ ಗೆಲ್ಲಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂಬ ರೀತಿಯಲ್ಲಿ ಬೆದರಿಕೆ ಹಾಕಿರುವುದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಚುನಾವಣಾ ಆಯೋಗ, ಗಂಗಮ್ಮ ಸ್ಪರ್ಧಿಸಿರುವ ಗ್ರಾ.ಪಂಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸೂಕ್ತಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ, ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆ ನಡೆಸಬೇಕಿದೆ.