ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ವಾಹನಗಳ ಮಾಲೀಕರಿಗೆ ಕಾರನ್ನು ಪಾರ್ಕ್ ಮಾಡಲು ಸ್ಥಳವೇ ಸಿಗುತ್ತಿಲ್ಲ. ಕೆಲವೆಡೆ ಗಂಟೆಗಟ್ಟಲೆ ಕಾದರೂ ಸ್ಥಳ ಸಿಗುವುದು ಕಷ್ಟ. ಇನ್ನು ದೂರದಲ್ಲಿ ಪಾರ್ಕ್ ಮಾಡಿದರೆ ಅರ್ಧ ,ಒಂದು ಕಿಮಿ ನಡೆಯಬೇಕಾಗುತ್ತದೆ. ಕಾರ್ ಇದ್ದೂ ಇಲ್ಲದಂತಾಗುತ್ತದೆ ಎಂದು ವಾಹನ ಮಾಲೀಕರ ಅಭಿಪ್ರಾಯ. ಕೆಲವೆಡೆ ಪಾರ್ಕ್ ಮಾಡಿದವರು ಬೆಳಿಗ್ಗೆ ಕಾರು ನಿಲ್ಲಿಸಿದರೆ ಎಲ್ಲ ಕೆಲಸ ಮುಗಿಸಿಕೊಂಡು ಬಂದು ಸಂಜೆ ಕಾರ್ ತೆಗೆದುಕೊಂಡು ಹೋಗುವ ಪರಿಪಾಠವೂ ಇದೆ.
ನಗರದ ಸದಾ ಜನನಿಬಿಡ ರಸ್ತೆಗಳಾದ ಡಿ ದೇವರಾಜ ಅರಸು ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆಗಳಲ್ಲಿ ಗಂಟೆಗಟ್ಟಲೆ ಕಾದರೂ ಪಾರ್ಕಿಂಗ್ ಸ್ಥಳ ಸಿಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹೊಸತೊಂದು ಉಪಾಯ ಕಂಡು ಹಿಡಿದಿದ್ದಾರೆ. ಇನ್ನು ಮುಂದೆ ದೇವರಾಜ ಅರಸು ರಸ್ತೆಯಲ್ಲಿ ಶಾಪಿಂಗ್ಗೆ ಬಂದವರು ಕಾರ್ ನಿಲ್ಲಿಸಿದರೆ ನಾಲ್ಕು ಗಂಟೆಗಳೊಳಗೆ ವಾಹನ ವಾಪಸ್ ಒಯ್ಯಬೇಕು. ಇಲ್ಲವಾದರೆ ಚಕ್ರ ಲಾಕ್ ಆಗುತ್ತೆ, ಕಾರ್ ಮಾಲೀಕರಿಗೆ ದಂಡ ಬೀಳುತ್ತೆ!
ದೇವರಾಜ ಅರಸು ರಸ್ತೆಯಲ್ಲಿ ಕಾರ್ ನಿಲ್ಲಿಸುವವರು ತಮ್ಮ ಕೆಲಸಗಳನ್ನು ನಾಲ್ಕು ಗಂಟೆಗಳ ಅವಧಿಯಲ್ಲಿ ಮುಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಚಕ್ರ ಲಾಕ್ ಮಾಡಿ ದಂಡ ವಿಧಿಸಲಾಗುತ್ತದೆ. ಕಾರ್ ಪಾರ್ಕಿಂಗ್ ಆದ ತಕ್ಷಣ ಪೊಲೀಸ್ ಸಿಬ್ಬಂದಿ ಸಮಯ ನಮೂದಿಸಿಕೊಂಡು ವಾಹನಕ್ಕೆ ಟ್ಯಾಗ್ ಹಾಕುತ್ತಾರೆ, ಮಾಲೀಕರಿಗೆ ರಸೀದಿ ನೀಡಲಾಗುತ್ತದೆ. ನಾಲ್ಕು ಗಂಟೆಯ ಅವಧಿಯಲ್ಲಿ ಮಾಲೀಕರು ಮತ್ತೆ ಬಂದು ಕಾರ್ ತೆಗೆದುಕೊಂಡು ಹೋಗಬೇಕು ಎಂಬ ಶರತ್ತು ವಿಧಿಸಲಾಗುತ್ತದೆ. ಇದರಿಂದಾಗಿ ಇತರ ವಾಹನಗಳಿಗೆ ಸ್ಥಳಾವಕಾಶ ಸಿಕ್ಕಂತಾಗುತ್ತದೆ. ಆದರೆ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ದೇವರಾಜ ಅರಸು ರಸ್ತೆಯಲ್ಲಿರುವ ತಮ್ಮ ಅಂಗಡಿಗಳಿಗೆ ಬರುವ ವರ್ತಕರಲ್ಲಿ ಸುಮಾರು ಮಂದಿ ಕಾರಿನಲ್ಲೇ ಬಂದು ಅಲ್ಲೇ ಕಾರ್ ನಿಲ್ಲಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಇದು ಕೂಡ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಆದ್ದರಿಂದ ಅವರು ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕೆಂದು ನಗರ ಸಂಚಾರಿ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ. ನಿನ್ನೆ ಈ ಸಂಬಂಧ ವರ್ತಕರೊಂದಿಗೆ ಸಭೆ ನಡೆಸಿರುವ ಸಂಚಾರಿ ಪೊಲೀಸ್ ಎಸಿಪಿ ಸಂದೇಶ್ ಕುಮಾರ್, ವರ್ತಕರಿಗೆ ಬೇರೆ ಪಾರ್ಕಿಂಗ್ ಸ್ಥಳ ಹುಡುಕಿಕೊಳ್ಳಲು ಅಥವಾ ಸೈಕಲ್ ಬಳಸಲು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಂಚಾರ ಎಸಿಪಿ ಸಂದೇಶ್ ಕುಮಾರ್ ಅವರು ನಮಗೆ ದ್ವಿಚಕ್ರ ವಾಹನಗಳ ಸಮಸ್ಯೆಯಿಲ್ಲ. ಕಾರ್ ಗಳ ಪಾರ್ಕಿಂಗ್ನದ್ದೇ ದೊಡ್ಡ ತಲೆನೋವು. ಇದರಿಂದ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದೇವೆ. ಇದಕ್ಕೆ ಅರಸು ರಸ್ತೆಯ ವರ್ತಕರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರದಲ್ಲೇ ಇದರ ಜಾರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.
ಇಲ್ಲಿನ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಪಾರ್ಕಿಂಗ್ಗೆ ಅವಕಾಶವಿದ್ದು, ಇದಕ್ಕೆ ವರ್ತಕರ ಸಂಘದವರು ಪಾಲಿಕೆಗೆ ಮನವಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈ ನೂತನ ನಿಯಮಾವಳಿ ಜಾರಿಗೆ ತರುವ ಕುರಿತು ಪೋಲೀಸ್ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯುಕ್ತರು ಒಪ್ಪಿಗೆ ಸೂಚಿಸಿದ ಕೂಡಲೇ ಆದರೆ ಅತೀ ಶೀಘ್ರದಲ್ಲಿ ಜಾರಿ ಆಗಲಿದೆ.