ಮೈಸೂರು: ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಹಲವರಿಗೆ ನ್ಯಾಯ ದೊರಕಿದ್ದರೆ ಮತ್ತೆ ಕೆಲವರಿಗೆ ಶಿಕ್ಷೆಯಾದ ಹಲವು ಪ್ರಕರಣಗಳು ನಮ್ಮ ಮುಂದಿವೆ.
ಸಾರ್ವಜನಿಕವಾಗಿ ನಾವು ಮಾಡುವ ಒಳ್ಳೆಯದು ಮತ್ತು ಕೆಟ್ಟದು ಯಾವುದೇ ಆಗಿರಲಿ ಅದು ಮೂರನೇ ಕಣ್ಣಿನಲ್ಲಿ ಸೆರೆಯಾಗಿ ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಎಲ್ಲರ ಕೈನಲ್ಲಿಯೂ ಮೊಬೈಲ್ ಇರುವ ಕಾರಣದಿಂದಾಗಿ ನಾವು ನಮ್ಮ ಸುತ್ತ ಮುತ್ತ ಯಾರೂ ನೋಡುತ್ತಿಲ್ಲ ಎಂಬ ಧೈರ್ಯದಲ್ಲಿ ಏನೇ ಕೆಟ್ಟ ಕೆಲಸ ಮಾಡಿದರೂ ಅದು ನಮಗೆ ಗೊತ್ತಿಲ್ಲದಂತೆ ಇನ್ಯಾರದ್ದೋ ಮೊಬೈಲ್ ಸೆರೆಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಬಿಡುತ್ತದೆ.
ಇದೀಗ ನಗರದ ಲಷ್ಕರ್ ಠಾಣೆಯ ಎಎಸ್ಐ ಮತ್ತು ಗರುಡ ವಾಹನದ ಚಾಲಕ ತಳ್ಳುಗಾಡಿಯ ವ್ಯಾಪಾರಿಯಿಂದ ಹಣ ಪಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತಮ್ಮ ಕೆಲಸಕ್ಕೆ ಸಂಚಕಾರ ತಂದು ಕೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುವುದಾರೆ ಲಷ್ಕರ್ ಠಾಣೆಯ ಎಎಸ್ ಐ ಕುಮಾರಸ್ವಾಮಿ ಮತ್ತು ಗರುಡ ವಾಹನ ಚಾಲಕ ಮಣಿಕಂಠ ಎಂಬವರು ತಳ್ಳುವ ಗಾಡಿಯಲ್ಲಿ ಸಾಗುತ್ತಿದ್ದ ವ್ಯಾಪಾರಿಯಿಂದ ಹಣ ಪಡೆಯುತ್ತಿದ್ದ ದೃಶ್ಯವನ್ನು ದೂರದಿಂದ ನೋಡಿದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು. ಈ ದೃಶ್ಯ ಪೊಲೀಸ್ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು.
ಈ ವೀಡಿಯೋವನ್ನು ನಗರ ಪೊಲೀಸ್ ಆಯುಕ್ತರು ತಳ್ಳುಗಾಡಿ ವ್ಯಾಪಾರಿಯಿಂದ ಹಣ ಪಡೆದ ಎಎಸ್ ಐ ಕುಮಾರಸ್ವಾಮಿ ಮತ್ತು ಚಾಲಕ ಮಣಿಕಂಠ ಅವರಿಬ್ಬರನ್ನು ಪತ್ತೆ ಹಚ್ಚಿ ಅಮಾನತು ಶಿಕ್ಷೆ ನೀಡಿದ್ದಾರೆ. ಈ ವೀಡಿಯೋದ ಸತ್ಯಾಸತ್ಯತೆಗಳು ಇಲಾಖಾ ತನಿಖೆಯಿಂದ ಹೊರ ಬರಬೇಕಿದೆ. ಆದರೆ ತಕ್ಷಣಕ್ಕೆ ಆಯುಕ್ತರು ಕ್ರಮ ಕೈಗೊಂಡಿರುವುದು ಮಾದರಿಯ ಕಾರ್ಯವಾಗಿದೆ ಎಂದು ಸಾರ್ವಜನಿಕರು ಪ್ರಶಂಶಿಸಿದ್ದಾರೆ. ಜತೆಗೆ ಇದು ಇತರೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.