ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಮೈಸೂರು ನಗರ ಘಟಕದ ವ್ಯಾಪಾರಿಗಳ ಪ್ರಕೋಷ್ಠ ವತಿಯಿಂದ ಸುಮಾರು 100 ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ಸ್ವೆಟರ್ ಅನ್ನು ವಿತರಿಸಲಾಯಿತು.
ನಗರದ ಚಿಕ್ಕಗಡಿಯಾರದ ಬಳಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು, ರಸ್ತೆ ಬದಿ ವ್ಯಾಪಾರಿಗಳಿಗೆ ಸ್ವೆಟರ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಭಾರತ ದೇಶದ ಪ್ರಗತಿಗೆ, ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ಕಾಂತ್ರಿಯನ್ನು ಮಾಡಿದರು. ಸಾಮಾನ್ಯ ಜನರಿಗೂ ಸಂಪರ್ಕ ಸಾಧನವನ್ನು ಕಲ್ಪಿಸಿದರು. ಗ್ರಾಮಗಳ ಅಭಿವೃದ್ಧಿಯನ್ನು ಮಾಡಿದರು. 65 ಸಾವಿರ ಕೋಟಿ ರೂ. ಅನ್ನು ಗ್ರಾಮ ಸಡಕ್ ಯೋಜನೆಗೆ ನೀಡಿದರು. ಭಾರತದ ಭವಿಷ್ಯದ ದಿಕ್ಕನ್ನು ಬದಲಿಸಿದ ಮಹಾನ್ ವ್ಯಕ್ತಿ ವಾಜಪೇಯಿ ಅವರು ಎಂದು ಅವರನ್ನು ಸ್ಮರಿಸಿದರು.