ಚಾಮರಾಜನಗರ: ಟಿವಿಎಸ್ ಸಮೂಹದ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬೇಡಗುಳಿಯಲ್ಲಿರುವ ತಮ್ಮ ಎಮರಾಲ್ಡ್ ಹೆವನ್ ಕಾಫಿ ಎಸ್ಟೇಟ್ನಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿದ್ದಾರೆ. ಅವರು ಗುರುವಾರ ಇಲ್ಲಿಗೆ ಬಂದಿದ್ದು ಇನ್ನೂ ಎರಡು ದಿನಗಳ ಕಾಲ ಎಸ್ಟೇಟ್ನಲ್ಲೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀನಿವಾಸನ್ ಅವರು ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಬಂದಿದ್ದು ಬೆಜ್ಜಲುಪಾಳ್ಯ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಹೆಲಿಕಾಪ್ಟರ್ ನಿಲುಗಡೆ ಮಾಡಲಾಗಿದೆ. ಅಲ್ಲಿಂದ ಎಸ್ಟೇಟ್ಗೆ ಅವರು ರಸ್ತೆ ಮಾರ್ಗದಲ್ಲಿ ತೆರಳಿದ್ದಾರೆ.
ಆದರೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ ಪರಿಸರ ವಲಯದಲ್ಲಿದ್ದು, ಹೆಲಿಕಾಪ್ಟರ್ ಇಳಿಯಲು ಅರಣ್ಯ ಇಲಾಖೆ ಅನುಮತಿ ನೀಡಿರುವುದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಹಿಂದೆ ಬಿಳಿಗಿರಿರಂಗನಬೆಟ್ಟದಲ್ಲಿ ರಾಷ್ಟ್ರಪತಿಯವರ ಹೆಲಿಕಾಪ್ಟರ್ ಇಳಿಸುವುದಕ್ಕೂ ಅರಣ್ಯ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಈಗ ಶ್ರೀನಿವಾಸನ್ ಅವರು ಖಾಸಗಿ ಜಮೀನಿನಲ್ಲೇ ಹೆಲಿಪ್ಯಾಡ್ ನಿರ್ಮಿಸಿದ್ದರೂ, ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಹೆಲಿಕಾಪ್ಟರ್ ಇಳಿಸುವುದಕ್ಕೆ ಅವಕಾಶ ಇಲ್ಲ’ ಎಂದು ವನ್ಯಜೀವಿ ಪ್ರೇಮಿಗಳು ಹೇಳಿದ್ದಾರೆ.
ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಪ್ರತಿಕ್ರಿಯಿಸಿ ಮೊದಲು ‘ಅವರು ತಮ್ಮ ಕಾಫಿ ಎಸ್ಟೇಟ್ನಲ್ಲೇ ಹೆಲಿಪ್ಯಾಡ್ ನಿರ್ಮಿಸಿ ಹೆಲಿಕಾಪ್ಟರ್ ಇಳಿಸಲು ಬಯಸಿದ್ದರು. ಅದಕ್ಕೆ ನಿಯಮಾವಳಿಗಳ ಪ್ರಕಾರ ಅನುಮತಿ ನೀಡಿಲ್ಲ. ಈಗ ಹೆಲಿಪ್ಯಾಡ್ ನಿರ್ಮಿಸಿರುವ ಜಾಗ ಖಾಸಗಿ ಜಮೀನು ಆಗಿದ್ದು ಸಂರಕ್ಷಿತ ಅರಣ್ಯ ಪ್ರದೇಶದಿಂದ ಹೊರಗಿದೆ. ಅರಣ್ಯದ ಗಡಿಯಿಂದ ಸಾಕಷ್ಟು ದೂರದಲ್ಲಿದೆ. ಅವರು ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಹಾಗೂ ಪರಿಸರ ಸೂಕ್ಷ ವಲಯಕ್ಕೆ ಸಂಬಂಧಿಸಿದ ಸಮಿತಿಯ ಅನುಮತಿ ಪಡೆದಿದ್ದಾರೆ’ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸರು, ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಂದಲೂ ಅಭಿಪ್ರಾಯ ಪಡೆದು ಅನುಮತಿ ನೀಡಲಾಗಿದೆ. ಹೆಲಿಪ್ಯಾಡ್ ಅನ್ನು ಕಂದಾಯ ಜಮೀನಿನಲ್ಲಿ ನಿರ್ಮಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.