ಮೈಸೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ಯಶಸ್ವಿಯಾಗಿ ಸೆರೆ ಹಿಡಿದು ಚಾಮರಾಜ ಮೃಗಾಲಯಕ್ಕೆ ಕೊಂಡೊಯ್ದಿದ್ದಾರೆ.
ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನ ದೇವಿ ಕೆರೆ ಬಳಿ ನಿನ್ನೆ ರಾತ್ರಿ ವಾಹನವೊಂದು ಢಿಕ್ಕಿ ಹೊಡೆದು ಚಿರತೆಯೊಂದು ನೋವಿನಿಂದ ಓಡಾಡಲು ಆಗದೆ ನರಳುತಿತ್ತು. ಸ್ಥಳೀಯರು ಇಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಇಂದು ಅರವಳಿಕೆ ತಜ್ಞರೊಂದಿಗೆ ಸ್ಥಳಕ್ಕೆ ತೆರಳಿದ ಆರ್ ಎಫ್ ಓ ವಸಂತ್ ಕುಮಾರ, ವನ್ಯ ಜೀವಿ ವೈದ್ಯ ಡಾ ನಾಗರಾಜ್ ಅವರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.
ಈ ಹೆಣ್ಣು ಚಿರತೆ ಎರಡುವರೆ ವರ್ಷ ಪ್ರಾಯದ್ದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದು ಗುಣಮುಖವಾದ ನಂತರ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.