ಮೈಸೂರು: ವಾರಾಂತ್ಯ ಕರ್ಫ್ಯೂ ಮೈಸೂರಿನಲ್ಲಿ ಭಾನುವಾರವೂ ಮುಂದುವರೆದಿದ್ದು, ಅಲ್ಲೊಂದು ಇಲ್ಲೊಂದು ವಾಹನಗಳ ಓಡಾಟ ಬಿಟ್ಟರೆ ನಗರ ಬಿಕೋ ಎನ್ನುತ್ತಿತ್ತು.
ಮೈಸೂರು ನಗರದಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕೆಂದು ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ವರ್ತಕರ ಮನವಿ ನಡುವೆಯೂ ಕರ್ಫ್ಯೂ ಜಾರಿಯಲ್ಲಿತ್ತು.
ಜಿಲ್ಲೆಯಲ್ಲಿ ಸೋಂಕು ಇಳಿಕೆಯಾಗಿರುವುದರಿಂದ ವಾರಾಂತ್ಯ ಕರ್ಫ್ಯೂ ಮುಂದುವರಿಸುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ಅಲ್ಲದೆ ವಾರಾಂತ್ಯ ಕರ್ಫ್ಯೂ ಬೇಡ ಎಂದು ಮೊದಲ ವಾರದಿಂದಲೂ ವರ್ತಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದರೂ ೪ನೇ ವಾರವೂ ವಾರಾಂತ್ಯ ಕರ್ಫ್ಯೂ ಮುಂದುವರಿದಿದ್ದು, ಶನಿವಾರ ಮಧ್ಯಾಹ್ನದಿಂದ ವರ್ತಕರು, ಸಾರ್ವಜನಿಕರು ಇಷ್ಟವಿಲ್ಲದಿದ್ದರೂ ಬಲವಂತದಿಂದ ಸ್ಪಂದಿಸಿದರು. ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮತ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟು ಶುಕ್ರವಾರ ರಾತ್ರಿಯಿಂದಲೇ ಸ್ಥಗಿತವಾಗಿತ್ತು. ಭಾನುವಾರ ಬೆಳಗ್ಗೆ ಎಂದಿನಂತೆ ವಾಹನ ಸಂಚಾರ ಕಂಡುಬಂದರೂ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ವಾಹನ ಸಂಚಾರ ಕಡಿಮೆಯಾಯಿತಲ್ಲದೇ, ವರ್ತಕರು ಅಗತ್ಯ ವಸ್ತುಗಳ ವ್ಯಾಪಾರ ಹಾಗೂ ವಾಣಿಜ್ಯ ವಹಿವಾಟನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮನೆಯತ್ತ ಸಾಗಿದರು. ಹೀಗಾಗಿ ನಗರದ ಪ್ರಮುಖ ಭಾಗಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಕರ್ಫ್ಯೂ ಹಿನ್ನೆಲೆ ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆಯಿಂದ ಬಸ್ ಸಂಚಾರವನ್ನು ಅರ್ಧದಷ್ಟು ಕಡಿತಗೊಳಿಸಲಾಗಿತ್ತು. ಇದರಿಂದ ಸಹಜವಾಗಿಯೇ ನಗರದಲ್ಲಿ ವಾಹನ ಓಡಾಟ ಕಂಡುಬಂತು.
ವಾರಾಂತ್ಯ ಕರ್ಫ್ಯೂ ಜಾರಿಯಾದ ಹಿನ್ನೆಲೆ ನಗರದ ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಸೇರಿದಂತೆ ಇತರೆ ಪ್ರವಾಸಿ ತಾಣಗಳ ಪ್ರವೇಶಕ್ಕೆ ಮೊದಲೇ ಶನಿವಾರ ಮತ್ತು ಭಾನುವಾರ ನಿರ್ಬಂಧ ಹೇರಿದ್ದರಿಂದ ಯಾರು ಧಾವಿಸಲಿಲ್ಲ. ರಜಾ ದಿನವಾಗಿದ್ದರಿಂದ ಹೆಚ್ಚಿನ ಜನ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದದ್ದು ಕಂಡು ಬಂದಿತು.