ಮೈಸೂರು: ಅನಿಸ ಚಂಡಮಾರುತದ ಬಳಿಕ ಮೇಲ್ಮೈ ಸುಳಿಗಾಳಿ ಮತ್ತು ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ 220ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
24 ಗಂಟೆಯಲ್ಲಿ (ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗ್ಗೆ ವರೆಗೆ) ಜಿಲ್ಲೆಯಲ್ಲಿ 16.2 ಮಿ.ಮೀಟರ್ ಮಳೆಯಾಗಿದ್ದು, 102ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಪೈಕಿ ಅತೀ ಹೆಚ್ಚು ಹುಣಸೂರು ತಾಲೂಕಿನಲ್ಲಿ 62 ಮನೆಗಳು ಹಾನಿಗೊಳಗಾವಗಿವೆ ಎಂದು ವರದಿಯಾಗಿದೆ. ಅಕಾಲಿಕ ಮಳೆಯು ಮುಖ್ಯವಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದು, ಪೂರ್ವ ಮುಂಗಾರಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ನಷ್ಟಕ್ಕೆ ಸಿಲುಕುವಂತಾಗಿದೆ.
ಏಪ್ರಿಲ್ ತಿಂಗಳ ಆರಂಭದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯಿತು. ಏಪ್ರಿಲ್ ಕೊನೆ ವಾರದಲ್ಲಿ ಮಳೆ ಬಂದಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿತ್ತು. ಕೃಷಿ ಇಲಾಖೆ ೩ ಲಕ್ಷದ ೯೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಿದೆ. ರೈತರು ದ್ವಿದಳ ಧಾನ್ಯ, ಭತ್ತ, ರಾಗಿ, ಜೋಳ, ಹತ್ತಿ, ತಂಬಾಕು ಬಿತ್ತನೆ ಮಾಡಿದ್ದರು. ನೀರಾವರಿ ಪ್ರದೇಶ ಮತ್ತು ಕೆರೆ ಅಚ್ಚುಕಟ್ಟಿನ ರೈತರು ಭತ್ತ ಬೆಳೆದಿದ್ದರು. ಮಳೆಯಾಶ್ರಿತ ಪ್ರದೇಶದಲ್ಲಿ ರಾಗಿ, ಜೋಳ, ದ್ವಿದಳ ಧಾನ್ಯ ಬಿತ್ತನೆ ಮಾಡಲಾಗಿತ್ತು. ಬೀಜ ಮೊಳಕೆಯೊಡೆಯುವ ಮುನ್ನ ಮಳೆ ಸುರಿಯಲಾರಂಭಿಸಿದೆ. ಬೆಳೆ ನಳನಳಿಸಬೇಕಾದ ಜಮೀನಿನಲ್ಲಿ ನೀರು ನಿಂತಿದೆ.
ಕೆ.ಆರ್.ನಗರ, ತಿ.ನರಸೀಪುರ, ಬನ್ನೂರು, ಕಬಿನಿ ನದಿಪಾತ್ರದ ಎಚ್.ಡಿ.ಕೋಟೆ, ನಂಜನಗೂಡು ಪ್ರದೇಶದ ರೈತರು ಕಟ್ಟು ನೀರಿನಲ್ಲಿ, ಕೆರೆಕಟ್ಟೆ ಅಚ್ಚುಕಟ್ಟು ರೈತರು ಭತ್ತ ನಾಟಿ ಮಾಡಿದ್ದರು. ಭತ್ತದ ಗೊನೆ ಕಟ್ಟುವ ಸಮಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಳುವರಿ ಕುಂಠಿತವಾಗುವ ಭಯ ಕಾಡುತ್ತಿದೆ.