ಮೈಸೂರು: ಮೈಸೂರಿಗೆ ಹೊಂದಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದ್ದ ಸಫಾರಿಯನ್ನು ಮಳೆಯ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.
ನಾಗರಹೊಳೆಗೆ ಬರುವ ಪ್ರವಾಸಿಗರಿಗೆ ಸಫಾರಿ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಈ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅರಣ್ಯ ಇಲಾಖೆ ಸಫಾರಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ. ಅರಣ್ಯದೊಳಗಿನ ಹಾದಿ ಸಂಪೂರ್ಣ ಕೆಸರಿನಿಂದ ಕೂಡಿದ್ದು, ಈ ಹಾದಿಯಲ್ಲಿ ವಾಹನಗಳು ತೆರಳವುದು ದುಸ್ತರವಾಗಿದೆ. ವಾಹಹ ಕೆಸರಿನಲ್ಲಿ ಹೂತುಕೊಂಡರೆ ಅದರಿಂದ ಅಪಾಯವೇ ಜಾಸ್ತಿ ಎಂದರೆ ತಪ್ಪಾಗಲಾರದು.
ವೀಕೆಂಡ್ ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಬರುತ್ತಿದ್ದರು. ಮಳೆ ಜತೆಯಲ್ಲಿ ಕಾಡಿನಲ್ಲಿ ಅಲೆದಾಡುತ್ತಾ ಕಾಡಿನ ನಡುವೆ ಓಡಾಡುವ ಪ್ರಾಣಿಗಳನ್ನು ನೋಡುವುದು ಪ್ರಾಣಿ ಪ್ರಿಯರಿಗೆ ಖುಷಿಕೊಡುತ್ತಿತ್ತು. ಆದರೆ ಇದೀಗ ಸಫಾರಿ ಸ್ಥಗಿತಗೊಳಿಸಿರುವುದರಿಂದ ಇತ್ತ ಪ್ರವಾಸಿಗರು ಬರಲು ಹಿಂದೇಟು ಹಾಕಿದರೆ ಅಚ್ಚರಿ ಪಡಬೇಕಾಗಿಲ್ಲ.
ಹಾಗೆನೋಡಿದರೆ ಸಫಾರಿ ಸ್ಥಗಿತಗೊಳ್ಳುವುದು ಆಗಾಗ್ಗೆ ನಡೆಯುತ್ತಿರುತ್ತದೆ. ಈ ಹಿಂದೆ ಕೋವಿಡ್ ಇದ್ದಾಗಲೂ ಸುಮಾರು ಏಳು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆಯ ಕಾರಣ ಸ್ಥಗಿತಗೊಳಿಸಲಾಗಿದ್ದು ,ಎಲ್ಲವೂ ಸರಿಹೋದ ಬಳಿಕ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.
ಸುಮಾರು 843 ಚ.ಕಿ.ಮೀ ಸುತ್ತಳತೆ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಮುಂಗಾರು ಮಳೆಯಲ್ಲಿ ಮೀಯುತ್ತಿದ್ದು, ಎಲ್ಲೆಡೆ ಹಸಿರು ಹಚ್ಚಡದ ನಿಸರ್ಗ ಕಂಗೊಳಿಸುತ್ತಿದೆ ಅದರ ನಡುವಿನ ವನ್ಯಪ್ರಾಣಿಗಳು ಅಲ್ಲಲ್ಲಿ ದರ್ಶನ ನೀಡಿ ರೋಮಾಂಚನ ಗೊಳಿಸುತ್ತಿವೆ. ಈ ಸುಂದರ ದೃಶ್ಯವನ್ನು ಸಫಾರಿಯಲ್ಲಿ ನೋಡುವುದೇ ಒಂದು ರೀತಿಯ ಮಜಾ. ಆದರೀಗ ಈ ಮಜಾ ಅನುಭವಿಸಲು ಒಂದಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.