ಕೆ.ಆರ್.ನಗರ: ಸುಮಾರು 30 ವರ್ಷಗಳಿಂದ ಬಿತ್ತನೆ ಮಾಡುತ್ತಿದ್ದ ಜ್ಯೋತಿ ಭತ್ತದ ಬದಲು ಮಂಡ್ಯ ಜ್ಯೋತಿ (ಕೆಎಂಪಿ-220) ಭತ್ತ ನಾಟಿ ಮಾಡಿರುವ ರೈತರು ಹೆಚ್ಚು ಇಳುವರಿ ಪಡೆದು ಈ ಬಾರಿ ಆದಾಯಗಳಿಸಿದ್ದಾರೆ ಎಂದು ಮಂಡ್ಯ ವಿಸಿ ಫಾರಂ ಸಂಸ್ಥೆಯ ನಿರ್ದೇಶಕ ಡಾ.ಎನ್.ಶಿವಕುಮಾರ್ ಹೇಳಿದರು.
ಹಳೆ ಎಡತೊರೆ ಬಳಿ ಇರುವ ಪಟ್ಟಣದ ಆಂಜನೇಯ ಬಡಾವಣೆಯ ಎಂ.ಜೆ.ಕುಮಾರ್ರವರ ಜಮೀನಿನಲ್ಲಿ ಮಂಡ್ಯ ಜ್ಯೋತಿ(ಕೆಎಂಪಿ-220) ತಳಿ ಬೆಳೆದಿದ್ದು ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ತಳಿಯನ್ನು ಮಂಡ್ಯ ವಿಸಿ ಫಾರಂ ವತಿಯಿಂದ ಜಾರಿಗೆ ತಂದು ಬಿತ್ತನೆ ಮಾಡಿಸಲಾಗಿದ್ದು ರೈತರಿಗೆ ಲಾಭವಾಗಿದೆ ಎಂದರು.
ಈ ತಳಿಯಿಂದ ಅಧಿಕ ಇಳುವರಿ ಬರುವುದರ ಜತೆಗೆ ಕಡಿಮೆ ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳನ್ನು ಸಿಂಪಡಿಸಲು ಸಲಹೆ ನೀಡಲಾಗಿತ್ತು, ಒಂದು ಎಕರೆಗೆ 24 ರಿಂದ 26 ಕ್ವಿಂಟಾಲ್ ಭತ್ತ ಇಳುವರಿ ಬಂದಿದ್ದು ಇದಕ್ಕೆ ಬೀಜೋಪಚಾರ ಮಾಡಿರುವುದೇ ಸಾಕ್ಷಿ ಎಂದು ತಿಳಿಸಿದ ನಿರ್ದೇಶಕರು ಈ ಬೆಳೆಯು 125 ರಿಂದ 130 ದಿನಗಳೊಳಗೆ ಕಟಾವಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಈ ತಳಿಯನ್ನು ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆ ಸೇರಿದಂತೆ ಕೆ.ಆರ್.ನಗರ, ಟಿ.ನರಸೀಪುರ, ನಂಜನಗೂಡು ತಾಲೂಕುಗಳಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡಿ ಸಾವಿರಾರು ಎಕರೆ ಪ್ರದೇಶದಲ್ಲಿ ಭಿತ್ತನೆ ಮಾಡಿಸಲಾಗಿತ್ತು ಈಗ ಉತ್ತಮ ಇಳುವರಿ ಬಂದು ರೈತರು ಲಾಭ ಕಾಣುವ ನಿಟ್ಟಿನಲ್ಲಿ ಇದ್ದಾರೆ ಮುಂದಿನ ವರ್ಷ ಭಿತ್ತನೆ ಕಾರ್ಯವನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯ ಇಇ ಈರಣ್ಣನಾಯಕ, ಎಇಇ ಗುರುರಾಜ್, ಡಾ.ಜಿ.ಆರ್.ದಿನೇಶ್, ತಾರಕುಮಾರ್, ಅಬ್ದಲ್, ಎಂ.ಜೆ.ರಮೇಶ್, ಮಲ್ಲಿಕಾ, ಸುದರ್ಶನ್, ಸಂಪತ್, ದೇವರಾಜು, ಸೇರಿದಂತೆ ನೂರಾರು ರೈತರು ಮತ್ತು ವಿಸಿ ಫಾರಂನ ಸಂಶೋಧಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.