ಮೈಸೂರು: ಅಮಿತ್ ಶಾರ ಹೇಳಿಕೆಗಳೇ ಕರ್ನಾಟಕದಲ್ಲಿ ಬಿಜೆಪಿ ಪತನಕ್ಕೆ ಕಾರಣವಾಗಲಿದೆದ್ದು, ಬಿಜೆಪಿಯ ಸಮಾಪ್ತಿ ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಸಾರ್ವಜನಿಕವಾಗಿ ಜೆಡಿಎಸ್, ದೇವೇಗೌಡರ ಬಗ್ಗೆ ಟೀಕೆ ಮಾಡಿದ್ದಾರೆ. ರಾಜ್ಯ ನಮ್ಮ ಕುಟುಂಬದ ಎಟಿಎಂ ಎಂದಿದ್ದಾರೆ. ಯಾವುದಾದರೂ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ದೇವೇಗೌಡರು ಹಾಗೂ ನನ್ನ ಹೆಸರಿದ್ದರೆ ತೋರಿಸಲಿ. ನೀವು ಯಾವ ರೀತಿ ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ ಎಂದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ದೇವೇಗೌಡರ ಕಾಲಿನ ಧೂಳು, ಉಗುರಿಗೂ ಸಮನಲ್ಲ. ನಿಮ್ಮ ರಾಜಕಾರಣವನ್ನು ಉತ್ತರ ಭಾರತದಲ್ಲಿ ಇಟ್ಟುಕೊಳ್ಳಿ, ಕರ್ನಾಟಕದಲ್ಲಿ ಅಲ್ಲ. ಅಮಿತ್ ಶಾ ಅವರ ಮಗನಿಗೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ಯಾವ ಆಧಾರದ ಮೇಲೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಕುರಿತಂತೆ ಟೀಕಿಸಲು ಯಾವ ನೈತಿಕತೆಯೂ ಇಲ್ಲ. ದೇವೇಗೌಡರ ಕುಟುಂಬ ನಾಡಿನ ಸಂಪತ್ತನ್ನು ಲೂಟಿ ಮಾಡಿದ ಒಂದೇ ಒಂದು ನಿದರ್ಶನವಿದ್ದರೂ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಜೆಡಿಎಸ್ ರಾಜ್ಯದ ಎಟಿಎಂ: ಅಮಿತ್ ಶಾ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನಾನೇನು ನಿಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಅರ್ಜಿ ಹಾಕಿ ಕುಳಿತಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾದಾಗ ಸರ್ಕಾರ ರಚನೆ ಮಾಡಲು ಬಿಜೆಪಿ, ಕಾಂಗ್ರೆಸ್‌ನವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಆದರೂ ಹೊಂದಾಣಿಕೆಯ ಮಾತುಗಳು ಏಕೆ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ, ಶಾಲಾ ಮಕ್ಕಳಿಗೆ ಸೈಕಲ್ ಸೇರಿದಂತೆ ಹಲವು ಕಾರ್ಯಕ್ರಮ ನೀಡಿ ರಾಜ್ಯದ ಎಟಿಎಂ ಆಗಿದೆ. ಈ ಬಾರಿ 120 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಗೆ ಭಯ, ಆತಂಕ ಶುರುವಾಗಿದೆ ಎಂದು ಟೀಕಿಸಿದರು.
ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ಅವರಿಂದಲೇ ಹೊರತು ಕೇಂದ್ರದ ನಾಯಕರಿಂದಲ್ಲ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ಬಸವರಾಜ ಬೊಮ್ಮಾಯಿಗೆ ಸಾಧ್ಯವಾಗುತ್ತಿಲ್ಲ. ಎಲ್ಲವೂ ದೆಹಲಿ ಬಿಜೆಪಿ ನಾಯಕರ ಅಣತಿಯಂತೆ ನಡೆಯುತ್ತಿದೆ. ಸಮುದಾಯದ ಮುಖಂಡರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡರಾದ ಎಚ್.ಕೆ.ರಾಮು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್ ಇದ್ದರು.