ಮೈಸೂರು: ಬೇಸಿಗೆಯಲ್ಲಿ ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಾರ್ವಜನಿಕರು ಮುಂದಾಗಬೇಕೆಂದು ಮೂಡ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಎರಡು ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದಲ್ಲಿ ಹಮ್ಮಿಕೊಂಡಿದ್ದು ನಗರದ ಚಾಮುಂಡಿಪುರಂನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮೂಕ ಸ್ಪಂದನ ಅಭಿಯಾನದ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಪರಿಸರ ರಕ್ಷತಿ ರಕ್ಷಿತಃ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಎರಡು ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ ಎಂದರು.
ಬೇಸಿಗೆಯ ದಿನಗಳಲ್ಲಿ ಇನ್ನೇನು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿರುತ್ತವೆ. ಜನವಸತಿ ಮತ್ತು ಜನಸಂಖ್ಯೆಗನುಗುಣವಾಗಿ ಮೊಬೈಲ್ ಮತ್ತು ಇತರೆ ತರಂಗದಿಂದಾಗಿ ಹಾಗೂ ಅಗತ್ಯ ನಾಗರಿಕ ಸವಲತ್ತುಗಳ ನೆರಳಿನಡಿಯಲ್ಲಿ ಈಗಾಗಲೇ ಸಂತತಿ ಕ್ಷೀಣಿಸುತ್ತಿದ್ದು, ಹಲವಾರು ಪಕ್ಷಿಗಳು ನಶಿಸಿ ಹೋಗುತ್ತಿವೆ. ಅಳಿದು ಉಳಿದಿವೆಯೇನೋ ಎಂಬಂತಿರುವ ಜನತೆಯ ಮಧ್ಯೆಯೇ ಬದುಕಿ ಬೆರೆತು ಜೀವಿಸುವ ಪ್ರಾಣಿಪಕ್ಷಿ ಸಂಕುಲಕ್ಕಿಂದು ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಪರಿತಪಿಸುವ ಕಾಲ ಇದಾಗಿದ್ದು ಈ ಭೂಮಂಡಲದಲ್ಲಿ ಸರ್ವಜೀವಿಗಳಿಗೂ ಸಮಬಾಳು ಸ್ವತಂತ್ರತೆಯಿರಬೇಕು ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಸಹ ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಕಾಣಸಿಗುವ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ನೆಡಲಾಗುವುದು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ಎಂದ ಅವರು, ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಪ್ರಾಣಿ ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ತುಂಬಿಡಬೇಕು. ಆಹಾರ ಧಾನ್ಯ ಮಿತವಾಗಿಟ್ಟು ಅವುಗಳನ್ನು ಸಲಹಬೇಕಿದೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಪೂರ್ವ ಸುರೇಶ್, ಜಿ ರಾಘವೇಂದ್ರ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ವಿನಯ್ ಕಣಗಾಲ್, ಸಚಿಂದ್ರ, ಚಕ್ರಪಾಣಿ, ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ರವಿಶಂಕರ್, ರೇಡಿಯೋ ಜಾಕಿ ಆರ್ ಜೆ ಅವಿನಾಶ್, ಎಸ್ ಬಿ ವಾಸುದೇವಮೂರ್ತಿ, ಲಿಂಗರಾಜು, ಮಿರ್ಲೆ ಪನೀಶ್, ರಾಕೇಶ್, ರಘು,ಹಾಗೂ ಇನ್ನಿತರರು ಹಾಜರಿದ್ದರು.