ಚಾಮರಾಜನಗರ: ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಹಾವು ಕಚ್ಚಿ ಸ್ವಾಮೀಜಿಯೊಬ್ಬರು ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಕೃಷಿ ಚಟುವಟಿಕೆ ಮೂಲಕ ಗಮನ ಸೆಳೆದಿದ್ದ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ ಇಮ್ಮಡಿ ಗುರುಮಲ್ಲ ಸ್ವಾಮೀಜಿ(42) ಮೃತಪಟ್ಟವರು.
ಇವರು ಮಠದ ಜಮೀನಿನಲ್ಲಿ ಕೃಷಿ ಕಾರ್ಮಿಕರೊಂದಿಗೆ ಕಳೆ ಕೀಳುತ್ತಿದ್ದಾಗ ಶ್ರೀಗಳಿಗೆ ಹಾವು ಕಚ್ಚಿದೆ. ವಿಷಯ ತಿಳಿದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆ ಗೋಪಾಲಪುರದ ಮಠದ ಬಳಿ ಭಾನುವಾರ ನಡೆಯಲಿದ್ದು, ಜಿಲ್ಲೆಯ ವಿವಿಧ ಮಠಗಳ ಶ್ರೀಗಳು ಬರಲಿದ್ದಾರೆ. ಕಾಯಕವೇ ಕೈಲಾಸ ಎಂಬ ಮಾತಿನ ಮಹತ್ವವ ಸಾರಿದ್ದ ಇವರು ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿದ್ದ 20 ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಲಕ್ಷಾಂತರ ರೂ. ಆದಾಯ ಗಳಿಸಿ ಗಮನ ಸೆಳೆದಿದ್ದರು.