ಚಾಮರಾಜನಗರ (ಏ.21) : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹೆದರಿಸಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದ ಆರೋಪಿಗೆ 20 ವರ್ಷ ಕಠಿಣ ಸಜೆ ಹಾಗು ಮೂವತೈದು ಸಾವಿರ ರೂಪಾಯಿ ವಿಧಿಸಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಚಾಮರಾಜನಗರ ತಾಲ್ಲೂಕು ಹೊನ್ನಳ್ಳಿ ಗ್ರಾಮದ 28 ವರ್ಷ ವಯಸ್ಸಿನ ಮಹೇಶ್ ಅಲಿಯಾಸ್ ಮಾಯ ಎಂಬಾತ ಶಿಕ್ಷೆಗೆ ಗುರಿಯಾಗಿದ್ದು ನೊಂದ ಬಾಲಕಿಗೆ ಕಾನೂನಿ ಸೇವೆಗಳ ಪ್ರಾಧಿಕಾರದಿಂದ ಒಂದು ತಿಂಗಳ ಒಳಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರಿಯಾ ನ್ಯಾಯಾಧೀಶೆ ಬಿ.ಎಸ್.ಭಾರತಿ ಆದೇಶ ನೀಡಿದ್ದಾರೆ.
ಚಾಮರಾಜನಗರ ತಾಲ್ಲೂಕು ಹೊನ್ನಳ್ಳಿ ಗ್ರಾಮದ ದೊಡ್ಡಮಾದೇಗೌಡರಗ ಮಹೇಶ್ ಅಲಿಯಾಸ್ ಮಾಯಾ ಎಂಬ ವ್ಯಕ್ತಿ 2019 ರ ಮಾರ್ಚ್ 17 ರಂದು 15 ವರ್ಷದ ವಯಸ್ಸಿನ ಬಾಲಕಿ ಅಪ್ರಾಪ್ತೆ ಎಂದು ಗೊತ್ತಿದ್ದರೂ ಪುಸಲಾಯಿಸಿ, ಮದುವೆಯಾಗುಗಿ ನಂಬಿಸಿ, ತನ್ನ ಜೊತೆ ಹೊನ್ನಳ್ಳಿಗೆ ಬರದೇ ಇದ್ದರೆ ವಿಷ ಕುಡಿಯುವುದಾಗಿ ಹೆದರಿಸಿದ್ದಾನೆ.
ಬಳಿಕ ಆಕೆಯನ್ನು ಗ್ರಾಮದ ಜಮೀನೊಂದರ ಬಳಿ ಕರೆದೊಯ್ದು ಬಳಿಕ ತನ್ನ ಬೈಕ್‌ನಲ್ಲಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಬಳಿಕ ಬೆಂಗಳೂರಿಗೆ ಆಕೆಯನ್ನು ಕರೆದೊಯ್ದು ಮನೆಯೊಂದರಲ್ಲಿ ಇರಿಸಿಕೊಂಡು ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಈ ವಿಷಯ ಗೊತ್ತಾಗಿ ನೊಂದ ಬಾಲಕಿಯ ತಂದೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಆರೋಪಿ ಮಹೇಶ್ ವಿರುದ್ದ ದೂರು ನೀಡಿದ್ದರು. ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 366(ಎ), 376(ಎನ್), ಪೋಕ್ಸೋ ಕಲಂ 4,6,12 ಹಾಗಿ ಕಲಂ 9,10 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯೆಡಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ಆರೋಪಿಯು ಅಪರಾಧ ಎಸಗಿರುವುದು ಸಾಕ್ಷ್ಯಾಧಾರ ಹಾಗು ವೈದ್ಯಕೀಯ ಪರೀಕ್ಷೆ ದೃಢ ಪಟ್ಟ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ 366 ರ ಅನ್ವಯ 5 ವರ್ಷ ಸಜೆ ರೂ. 10 ಸಾವಿರ ದಂಡ, ದಂಡ ತೆರಲು ವಿಫಲವಾದಲ್ಲಿ ಮತ್ತೆ 1 ತಿಂಗಳು ಸಜೆ, ಐಪಿಸಿ ಸೆಕ್ಷನ್ 376 ಹಾಗು ಪೋಕ್ಸೋ ಕಾಯ್ದೆ ಕಲಂ 4ರ ಅನ್ವಯ 20 ವರ್ಷ ಸಾದಾ ಸಜೆ ರೂ.10 ಸಾವಿರ ದಂಡ, ದಂಡ ತೆರಲು ವಿಫಲನಾದಲ್ಲಿ ಮತ್ತೆ 1 ತಿಂಗಳ ಸಜೆ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆ ಕಲಂ 6 ಅನ್ವಯ 20 ವರ್ಷ ಕಠಿಣ ಸಜೆ, ರೂ.10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸಜೆ, ಪೋಕ್ಸೋ ಕಾಯ್ದೆ ಕಲಂ12 ಅನ್ವಯ 1 ವರ್ಷ ಸಜೆ, ರೂ.5 ಸಾವಿರ ರೂಪಾಯಿ ದಂಡ, ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆ 1 ತಿಂಗಳು ಸಜೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9 ರ ಅನ್ವಯ 2 ವರ್ಷ ಸಜೆ ವಿಧಿಶಿ ಈ ಎಲ್ಲಾ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.