ಸರಗೂರು: ತಾಲೂಕಿನ ಎಂ.ಸಿ.ತಳಲು ಗ್ರಾಮದ ವಯೋವೃದ್ಧೆ ಮಾನಸಿಕ ಅಸ್ವಸ್ಥೆಯೊಬ್ಬರು ಗುರುವಾರ ಬೆಳಗ್ಗೆ ಎತ್ತಿಗೆ ಗ್ರಾಮದ ಜಮೀನೊಂದರಲ್ಲಿನ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮದ ದೇವಮ್ಮ(65) ಕೃಷಿ ಹೊಂಡಕ್ಕೆ ಬಿದ್ದ ವಯೋವೃದ್ಧೆ. ಮೃತರಿಗೆ ಮೂವರು ಪುತ್ರರಿದ್ದಾರೆ. ಇವರು ಗುರುವಾರ ಬೆಳಗ್ಗೆ 8 ಗಂಟೆಯಲ್ಲಿ ಜಮೀನಿನ ಕಡೆಗೆ ಹೋಗುತ್ತಿದ್ದು, ಆಯ ತಪ್ಪಿ ಎತ್ತಿಗೆ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ತೆಗೆಯಲಾದ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಎತ್ತಿಗೆ ಗ್ರಾಮದ ರೈತರೊಬ್ಬರು ಜಮೀನಿಗೆ ಹೋಗಿದ್ದಾಗ ಕೃಷಿ ಹೊಂಡದಲ್ಲಿ ಬಿದ್ದಿದ್ದ ದೇವಮ್ಮ ಮೃತದೇಹ ಕಂಡಿದ್ದಾರೆ. ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮೃತ ದೇಹವನ್ನು ಹೊರತೆಗೆದು ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಎಂ.ಸಿ.ತಳಲುನಲ್ಲಿ ಗುರುವಾರ ನೆರೆವೇರಿದೆ.