ಚಾಮರಾಜನಗರ: ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಎಂಟು ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕೆ.ಪಿ.ಮೊಹಲ್ಲಾದ ನಿವಾಸಿ ಯಾಸೀರ್ ಅರಾತ್(19), ಮುಬಾರಕ್ ಮೊಹಲ್ಲಾದ ನಿವಾಸಿ, ಫರ್ಹಾದ್ ಉರ್ ರೆಹಮಾನ್ ಷರೀಷ್(33) ಬಂಧಿತರು.
ಬಂಡೀಪುರ, ಬಿಆರ್‌ಟಿ ಎರಡು ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿರುವ ಜಿಲ್ಲೆಯಲ್ಲಿ ಕಳ್ಳಬೇಟೆಗಾರರ ಅಕ್ರಮ ಚಟುವಟಿಕೆಗಳು ಕಾಡಂಚಿನ ಗ್ರಾಮಗಳಲ್ಲಿ ಪತ್ತೆಯಾಗುತ್ತಿದ್ದವು. ಆದರೀಗ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲೂ ಸದ್ದಿಲ್ಲದೆ ಈ ಜಾಲ ಸಕ್ರಿಯವಾಗಿರುವುದಕ್ಕೆ ನಿದರ್ಶನ ಸಿಕ್ಕಿದೆ.
ಆರೋಪಿಗಳು ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಬಳಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ್ದರು ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು ಈ ವೇಳೆ ಯಾಸೀರ್ ಪ್ಯಾಂಟ್ ಜೇಬಿನಲ್ಲಿದ್ದ ಪೊಟ್ಟಣದಲ್ಲಿ 5 ಹುಲಿ ಉಗುರುಗಳು ಮತ್ತು ಈತನ ಜತೆಗಿದ್ದ ಫರ್ಹಾದ್ ಜೇಬಿನಲ್ಲಿದ್ದ ಕವರ್‌ನಲ್ಲಿ 3 ಹುಲಿ ಉಗುರು ಪತ್ತೆಯಾಗಿವೆ.
ಈ ಇಬ್ಬರು ಆರೋಪಿಗಳು ನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಇವರಿಗೆ ಹುಲಿ ಉಗುರು ಹೇಗೆ ಸಿಕ್ಕಿತು? ಕಳ್ಳಬೇಟೆಗಾರರ ಜಾಲ ಜಿಲ್ಲಾ ಕೇಂದ್ರದಲ್ಲಿ ಸದ್ದಿಲ್ಲದೆ ವ್ಯಾಪಿಸಿದ್ದು ಹೇಗೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.
ಕಾರ್ಯಾಚರಣೆಯಲ್ಲಿ ಸಿ.ಎ.ಎನ್ ಠಾಣೆಯ ಪಿಎಸ್‌ಐ ಮಾದೇಶ್, ಇನ್ಸ್‌ಪೆಕ್ಟರ್ ಮಹದೇವಶೆಟ್ಟಿ ಮತ್ತು ಸಿಬ್ಬಂದಿ ಎಂ.ಮಹೇಶ, ಮಂಜುನಾಥ, ರಾಜು, ಜಗದೀಶ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದು ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅಭಿನಂದಿಸಿದ್ದಾರೆ.