ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ನಗರಸಭೆಯಲ್ಲಿ ತೆರವಾಗಿರುವ 7 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಅ. 28 ರಂದು ಚುನಾವಣೆ ನಡೆಯಲಿದೆ.
ಕೊಳ್ಳೇಗಾಲ ನಗರಸಭೆಯ 2, 6, 7, 13, 21, 25, ಹಾಗೂ26 ನೇ ವಾರ್ಡ್ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಅ. 10 ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಅ. 17 ಕಡೆಯ ದಿನವಾಗಿದೆ. ಅ.18 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಕ್ಟೋಬರ್ 20 ಕಡೆಯ ದಿನ. ಮತದಾನ ಅವಶ್ಯವಿದ್ದರೆ ಅ. 28 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರು ಮತದಾನ ಅವಶ್ಯವಿದ್ದಲ್ಲಿ ಅ. 30 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮತಗಳ ಎಣಿಕೆ ಕಾರ್ಯವು ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ಅ.31 ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಅ. 31 ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಸದಾಚಾರ ಸಂಹಿತೆಯು ಉಪ ಚುನಾವಣಾ ನಡೆಯುವ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಅ.10 ರಿಂದ 31 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಡಿಸಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.