ಚಾಮರಾಜನಗರ: ಇದುವರೆಗೆ ಕಾಡಾನೆ, ಕಾಡುಹಂದಿ, ಚಿರತೆ, ಹುಲಿಗಳ ದಾಳಿಯಿಂದ ಕಂಗಾಲಾಗಿದ್ದ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಜನ ಇದೀಗ ಕರಡಿ ದಾಳಿಗೆ ಬಲಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕರಡಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದ್ದು, ಈ ಹಿಂದೆ ಅರಣ್ಯದಲ್ಲಿ ಕರಡಿಗಳು ಅಡ್ಡಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದವು. ಆದರೆ ಇದೀಗ ಕರಡಿ ಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಸಾಯಿಸಿರುವುದು ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ.
ಬಿಳಿಗಿರಿರಂಗನಬೆಟ್ಟದ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ಗ್ರಾಮದ ನಿವಾಸಿ ಭದ್ರಪ್ಪ ಎಂಬುವರ ಪುತ್ರ ರಾಜು (55) ಮೇಲೆ ಕರಡಿ ದಾಳಿಗೆ ಬಲಿಯಾದ ದುರ್ದೈವಿ. ಇವರ ಮೇಲೆ ಕರಡಿ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪುಣಜನೂರು ವಲಯ ಅರಣ್ಯಾಧಿಕಾರಿ ನಿಸಾರ್ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.