ಹನೂರು: ಮೊದಲ ಮಳೆ ಚಾಮರಾಜನಗರದಲ್ಲಿ ದುರಂತ ಸಂಭವಿಸಿದ್ದು, ಮಳೆ ವೇಳೆ ಸಿಡಿಲು ಬಡಿದು ಸುಮಾರು 12 ಮೇಕೆಗಳು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನೂರು ಹೊರ ವಲಯದಲ್ಲಿ ನಡೆದಿದೆ.
ಬುಧವಾರ ಸಂಜೆ ಸಂಭವಿಸಿದ ಗುಡುಗು, ಮಿಂಚು ಸಹಿತ ಮಳೆಗೆ ಈ ದುರ್ಘಟನೆ ಸಂಭವಿಸಿದ್ದು ಈ ಆಕಸ್ಮಿಕ ಘಟನೆಯಿಂದ ಮೇಕೆಗಳ ಮಾಲೀಕ ವಿಶೇಷ ಚೇತನ ವೆಂಕಟಭೋವಿ ಕಂಗಲಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಭದ್ರಯನ ಹಳ್ಳಿ ಊರು ಗೌಡ ಕೃಷ್ಣೆಗೌಡ ಒತ್ತಾಯಿಸಿದ್ದಾರೆ.
ಮೇಕೆಗಳ ಮಾಲೀಕ ವಿಶೇಷ ಚೇತನ ವೆಂಕಟಬೋವಿ ಈ ಅನಿರೀಕ್ಷಿತ ದುರ್ಘಟನೆಯಿಂದ ತತ್ತರಿಸಿದ್ದು, ಕಣ್ಣೆದುರೆ ಸಾಕಿ ಸಲಹಿದ ಲಕ್ಷಾಂತರ ರೂ. ರೂ ಬೆಲೆಯ ಮೇಕೆಗಳ ಸಾವಿನಿಂದ ಮುಂದೇನು ಎಂಬ ಆತಂಕ ಶುರುವಾಗಿದೆ. ಸಾಲ ಮಾಡಿ ಸಾಕಣೆ ಮಾಡಿದ್ದ ಮೇಕೆಗಳ ಸಾವಿನಿಂದ ಲಕ್ಷಾಂತರ ರೂ ನಷ್ಟವಾಗಿದೆ.
ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮಳೆ ಸುರಿದ ಸಂದರ್ಭ ಸಿಡಿಲಿಗೆ ಸಿಲುಕಿ ಇಂತಹ ದುರ್ಘಟನೆಗಳು ನಡೆಯುವುದು ಸಾಮಾನ್ಯವಾಗಿದ್ದು ಹೊಲಗದ್ದೆ ಗಳಲ್ಲಿ ಕಾರ್ಯ ನಿರ್ವಹಿಸುವ ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.